ಉತ್ತರ ಪ್ರದೇಶ: ಅಂಬೇಡ್ಕರ್ ಪ್ರತಿಮೆಯನ್ನು ಉರುಳಿಸಿ, ನಾಲೆಗೆ ಎಸೆದ ದುಷ್ಕರ್ಮಿಗಳು

Photo credit: telegraphindia.com
ಪ್ರಯಾಗ್ ರಾಜ್: ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆಯನ್ನು ನೆಲಕ್ಕುರುಳಿಸಿ, ಅದನ್ನು ನಾಲೆಗೆ ಎಸೆದಿದ ಘಟನೆ ಗಂಗಾನಗರದ ಕೊಡಾಪುರ್ ಗ್ರಾಮದಲ್ಲಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಪ್ರತಿಮೆಯನ್ನು ವ್ಯಾಜ್ಯವಿದ್ದ ಹೊಲದ ರಸ್ತೆಯೊಂದರಲ್ಲಿ ಸ್ಥಾಪಿಸಲಾಗಿತ್ತು ಎನ್ನಲಾಗಿದೆ ಎಂದು ಅವರು ಹೇಳಿದ್ದಾರೆ.
ಅಪರಿಚಿತ ದುಷ್ಕರ್ಮಿಗಳು ಈ ಪ್ರತಿಮೆಯನ್ನು ನೆಲಕ್ಕುರುಳಿಸಿದ್ದು, ನಂತರ ಅದನ್ನು ಸಮೀಪದ ನಾಲೆಯೊಂದಕ್ಕೆ ಎಸೆದಿದ್ದರು ಎಂದು ಹೇಳಲಾಗಿದೆ. ಈ ಪ್ರತಿಮೆಯ ವಿಚಾರದಲ್ಲಿ ಸ್ಥಳೀಯರ ನಡುವೆ ವೈಮನಸ್ಸು ಮೂಡಿತ್ತು ಎಂದು ಗಂಗಾನಗರ ಉಪ ಪೊಲೀಸ್ ಆಯುಕ್ತ ಕುಲದೀಪ್ ಗುಣಾವತ್ ಸೋಮವಾರ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಹಾಗೂ ಶೀಘ್ರದಲ್ಲೇ ಅಂಬೇಡ್ಕರ್ ಅವರ ನೂತನ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಸದ್ಯ ಸ್ಥಳದಲ್ಲಿ ಶಾಂತ ವಾತಾವರಣವಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದೂ ಅವರು ಹೇಳಿದ್ದಾರೆ.





