ಶಿಶುವಿನ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್ ನಿರಾಕರಿಸಿದ ಆಸ್ಪತ್ರೆ; ಪ್ಲಾಸ್ಟಿಕ್ ಚೀಲದಲ್ಲಿ ಸಾಗಿಸಿದ ಬುಡಕಟ್ಟು ಕುಟುಂಬ

ಸಾಂದರ್ಭಿಕ ಚಿತ್ರ | Photo Credit : freepik
ರಾಂಚಿ, ಡಿ. 20: ಆ್ಯಂಬುಲೆನ್ಸ್ ಒದಗಿಸಲು ಆಸ್ಪತ್ರೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಬುಡಕಟ್ಟು ಕುಟುಂಬವೊಂದು ತನ್ನ ನಾಲ್ಕು ತಿಂಗಳ ಮಗುವಿನ ಮೃತದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಮನೆಗೆ ಸಾಗಿಸಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್ ನಿಂದ ವರದಿಯಾಗಿದೆ.
ನೋಮುಂಡಿ ಬ್ಲಾಕ್ ನ ಬಲ್ಜೋರಿ ಗ್ರಾಮದ ನಿವಾಸಿ ದಿಂಬ ಚತೊಂಬ ತನ್ನ ಕಾಯಿಲೆಪೀಡಿತ ಮಗುವನ್ನು ಚೈಬಸದಲ್ಲಿರುವ ಸದರ್ ಆಸ್ಪತ್ರೆಗೆ ಗುರುವಾರ ಕರೆದುಕೊಂಡು ಹೋಗಿದ್ದರು. ಮಗುವಿನ ಪರಿಸ್ಥಿತಿ ಹದಗೆಟ್ಟು ಶುಕ್ರವಾರ ಚಿಕಿತ್ಸೆಯ ನಡುವೆಯೇ ಅದು ಕೊನೆಯುಸಿರೆಳೆಯಿತು.
ಮಗು ಮೃತಪಟ್ಟ ಬಳಿಕ, ಮಗುವಿನ ಪಾರ್ಥಿವ ಶರೀರವನ್ನು ಮನೆಗೆ ಒಯ್ಯಲು ವಾಹನವೊಂದನ್ನು ಒದಗಿಸುವಂತೆ ಕುಟುಂಬ ಸದಸ್ಯರು ಆಸ್ಪತ್ರೆಯ ಅಧಿಕಾರಿಗಳನ್ನು ವಿನಂತಿಸಿದರು. ಅವರು ವಾಹನಕ್ಕಾಗಿ ಗಂಟೆಗಟ್ಟಳೆ ಕಾದರು. ಆದರೆ, ಆಸ್ಪತ್ರೆಯು ಅವರಿಗೆ ಆ್ಯಂಬುಲೆನ್ಸ್ ನೀಡಲಿಲ್ಲ.
ದಿಂಬರ ಕಿಸೆಯಲ್ಲಿ ಕೇವಲ 100 ರೂಪಾಯಿ ಇತ್ತು. ಅಸಹಾಯಕರಾದ ಅವರು ಸಮೀಪದ ಅಂಗಡಿಯೊಂದರಿಂದ 20 ರೂ.ಗೆ ಪ್ಲಾಸ್ಟಿಕ್ ಚೀಲವೊಂದನ್ನು ಖರೀದಿಸಿ ಅದರಲ್ಲಿ ಮಗುವಿನ ಮೃತದೇಹವನ್ನು ತುಂಬಿಸಿ ಬಸ್ ನಲ್ಲಿ ಮನೆಗೆ ತೆಗೆದುಕೊಂಡು ಹೋದರು.
ತನಿಖೆಗೆ ಆದೇಶ
ಈ ಘಟನೆಯ ಬಗ್ಗೆ ಪಶ್ಚಿಮ ಸಿಂಗ್ಭೂಮ್ ಜಿಲ್ಲಾಡಳಿತ ಶನಿವಾರ ತನಿಖೆಗೆ ಆದೇಶಿಸಿದೆ. ‘‘ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ’’ ಎಂದು ಜಿಲ್ಲಾಧಿಕಾರಿ ಚಂದನ್ ಕುಮಾರ್ ಪಿಟಿಐಗೆ ತಿಳಿಸಿದರು.
‘‘ಇಲ್ಲಿಯವರೆಗೆ ನಮಗೆ ಲಭಿಸಿದ ಮಾಹಿತಿಯಂತೆ, ಮೃತ ಶಿಶುವಿನ ತಂದೆ ಆ್ಯಂಬುಲೆನ್ಸ್ ಬೇಕೆಂದು ಆಸ್ಪತ್ರೆಯಲ್ಲಿ ಯಾರಲ್ಲಿಯೂ ಹೇಳದೆ ಮಗುವಿನ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ’’ ಎಂದು ಜಿಲ್ಲಾಧಿಕಾರಿ ಹೇಳಿಕೊಂಡರು.
ಮೃತದೇಹವನ್ನು ಒಯ್ಯಲು ಆಸ್ಪತ್ರೆಯಲ್ಲಿ ಉಚಿತ ಆ್ಯಂಬುಲೆನ್ಸ್ ಇಲ್ಲದಿದ್ದರೂ, ಅವರು ಆಸ್ಪತ್ರೆಯಲ್ಲಿ ಯಾರಿಗಾದರೂ ಹೇಳಿದ್ದರೆ ವ್ಯವಸ್ಥೆ ಮಾಡಲು ನಾವು ಪ್ರಯತ್ನಿಸಬಹುದಾಗಿತ್ತು ಎಂದು ಅವರು ಹೇಳಿದರು.







