ಅಮೆರಿಕದಿಂದ ಗಡಿಪಾರಾಗಿ ಅಮೃತಸರಕ್ಕೆ ಆಗಮಿಸಿದ ಮತ್ತಿಬ್ಬರು ಆರೋಪಿಗಳ ಬಂಧನ

PC : PTI
ಹೊಸದಿಲ್ಲಿ: ಅಮೆರಿಕದಿಂದ ಗಡಿಪಾರಾಗಿ ರವಿವಾರ ಅಮೆರಿಕ ವಿಮಾನದಲ್ಲಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ 112 ಭಾರತೀಯರ ಮೂರನೇ ತಂಡದಿಂದ ಇಬ್ಬರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಅಮೆರಿಕದ ವಿಮಾನದಲ್ಲಿ ಶನಿವಾರ ತಡ ರಾತ್ರಿ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 119 ಭಾರತೀಯರ ತಂಡದಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸೋದರ ಸಂಬಂಧಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು.
ರವಿವಾರ ಬಂಧಿತರಾದವರಲ್ಲಿ ಓರ್ವನನ್ನು ಗುರ್ವಿಂದರ್ ಸಿಂಗ್ (26) ಎಂದು ಗುರುತಿಸಲಾಗಿದೆ. ಈತ ಲುಧಿಯಾನದ ನಿವಾಸಿ. 2021ರ ಕಳವು ಪ್ರಕರಣದಲ್ಲಿ ಈತ ಬೇಕಾದವನಾಗಿದ್ದ. ಈತನ ವಿರುದ್ಧ ಜಾಮೀನು ರಹಿತ ಬಂಧನಾದೇಶ ಬಾಕಿ ಇತ್ತು. ಆದುದರಿಂದ ಮೆಹರ್ಬಾನ್ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆದರೆ, ಈ ಬಂಧನವನ್ನು ಗುರ್ವಿಂದರ್ ಸಿಂಗ್ ಕುಟುಂಬ ರಾಜಕೀಯ ಪ್ರೇರಿತ ಎಂದು ಪ್ರತಿಪಾದಿಸಿದೆ. ಈ ಹಿಂದೆ ಶಿರೋಮಣಿ ಅಕಾಲಿ ದಳ (ಅಮೃತಸರ)ದೊಂದಿಗಿನ ನಂಟಿನ ಕಾರಣಕ್ಕಾಗಿ ಈತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಈತನ ಕುಟುಂಬ ಹೇಳಿದೆ. ಈತನ ವಿರುದ್ಧ ಎರಡು ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆಯೇ ಅಥವಾ ಜಾಮೀನಿನಲ್ಲಿ ಹೊರಗಡೆ ಇದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಮೆರಿಕಕ್ಕೆ ತೆರಳಲು ಸಿಂಗ್ ಟ್ರಾವೆಲ್ ಏಜೆಂಟ್ ಗೆ 45 ಲಕ್ಷ ರೂ. ನೀಡಿದ್ದಾನೆ ಎಂದು ವರದಿಯಾಗಿದೆ.
ಈ ನಡುವೆ, ಕುರುಕ್ಷೇತ್ರದ ಪೆಹೋವಾದ ನಿವಾಸಿ ಸಾಹಿಲ್ ವರ್ಮಾನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. 2022 ಮೇಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಈತ ಬೇಕಾದವನಾಗಿದ್ದ. ಈತನ ವಿರುದ್ಧ ಭಾರತೀಯ ದಂಡ ಸಹಿತೆ ಹಾಗೂ ಪೊಕ್ಸೊ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ಬಳಿಕ ವರ್ಮಾ ವಿಯೆಟ್ನಾಂಗೆ ಪರಾರಿಯಾಗಿದ್ದ. ಅಲ್ಲಿಂದ ಇಟಲಿಗೆ ತೆರಳಿ ಎರಡು ವರ್ಷ ಇದ್ದ.
ಈತ ಅಕ್ರಮವಾಗಿ ಮೆಕ್ಸಿಕೊ ಗಡಿಯ ಮೂಲಕ ಜನವರಿ 25ರಂದು ಅಮೆರಿಕ ಪ್ರವೇಶಿಸಿದ್ದ. ಬಳಿಕ ಅಮೆರಿಕ ಗಡಿ ಗಸ್ತು ತಂಡ ಈತನನ್ನು ಬಂಧಿಸಿತ್ತು. ಈತ ಗಡಿಪಾರುಗೊಂಡು ಅಮೆರಿಕದ ವಿಮಾನದಲ್ಲಿ ಅಮೃತಸರಕ್ಕೆ ಆಗಮಿಸಿದಾಗ ಪೆಹೋವಾ ನಗರ ಪೊಲೀಸ್ ಠಾಣೆಯ ಪೊಲೀಸ್ ತಂಡ ಆತನನ್ನು ಬಂಧಿಸಿತು. ಅಮೆರಿಕಕ್ಕೆ ಪಾರಾಗಲು ಈತ ಟ್ರಾವೆಲ್ ಏಜೆಂಟ್ಗೆ 38 ಲಕ್ಷ ರೂ. ಪಾವತಿಸಿದ್ದ ಎಂದು ವರದಿಯಾಗಿದೆ.







