ರಾಜ್ಯಗಳ ಮೇಲೆ ಕೇಂದ್ರ ಸವಾರಿ: ರಾಜ್ಯ ಹಕ್ಕುಗಳ ರಕ್ಷಣೆಗೆ ಮುಂದಾದ ತಮಿಳುನಾಡು

ಎಮ್.ಕೆ. ಸ್ಟಾಲಿನ್ | PC : PTI
ಚೆನ್ನೈ : ಕೇಂದ್ರ ಸರ್ಕಾರದ ಜತೆಗಿನ ಸಂಘರ್ಷದ ಬೆನ್ನಲ್ಲೇ, ರಾಜ್ಯಗಳ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆ ಬಗೆಗಿನ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ಸಂವಿಧಾನಾತ್ಮಕವಾಗಿ ಖಾತರಿಪಡಿಸಿರುವ ರಾಜ್ಯಗಳ ಹಕ್ಕುಗಳನ್ನು ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ಮತ್ತು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಶಿಫಾರಸ್ಸು ಮಾಡುವಂತೆ ಸಮಿತಿಗೆ ಸೂಚಿಸಲಾಗಿದೆ. ಮುಂದಿನ ವರ್ಷದ ಜನವರಿ ವೇಳೆಗೆ ಸಮಿತಿ ಮಧ್ಯಂತರ ವರದಿ ಸಲ್ಲಿಸಲಿದ್ದು, ಎರಡು ವರ್ಷಗಳಲ್ಲಿ ಪೂರ್ಣ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಸಿಎಂ ನಡೆಯನ್ನು ಖಂಡಿಸಿ ಬಿಜೆಪಿ ಹಾಗೂ ಎಐಎಡಿಎಂಕೆ ಸದಸ್ಯರು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರೆ, ಡಿಎಂಕೆ ಮಿತ್ರ ಪಕ್ಷಗಳು ಸ್ಟಾಲಿನ್ ಅವರನ್ನು ಬೆಂಬಲಿಸಿದವು. "ಸಂಪೂರ್ಣ ಸ್ವಾಯತ್ತತೆ" ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಆತಂಕ ವ್ಯಕ್ತಪಡಿಸಿದರು ಹಾಗೂ ಸಿಎಂ ಕ್ರಮದ ನ್ಯಾಯಬದ್ಧತೆ ಮತ್ತು ಸಮರ್ಪಕತೆಯನ್ನು ಪ್ರಶ್ನಿಸಿದರು.
"ರಾಜ್ಯಗಳ ಹಕ್ಕುಗಳು ಕ್ಷೀಣಿಸುತ್ತಿವೆ ಮತ್ತು ಜನರ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವ ಅಗತ್ಯವಿದೆ ಎನ್ನುವುದನ್ನು ನೋವಿನಿಂದ ಅಧಿಕೃತವಾಗಿ ಹೇಳುತ್ತಿದ್ದೇನೆ" ಎಂದು ಸ್ಟಾಲಿನ್ ನುಡಿದರು. ಪ್ರಬಲ ದೇಶವನ್ನು ದುರ್ಬಲ ರಾಜ್ಯಗಳಿಂದ ಕಟ್ಟಲಾಗದು, ಸಶಕ್ತ ರಾಷ್ಟ್ರಗಳಿಂದಷ್ಟೇ ಕಟ್ಟಲು ಸಾಧ್ಯ. ತಮಿಳುನಾಡು ಈ ನಿಟ್ಟಿನಲ್ಲಿ ನಾಯಕತ್ವ ವಹಿಸಲಿದೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಪ್ರತಿಪಾದಿಸಿದ್ದಾರೆ.