ಲೋಕಸಭೆಯಲ್ಲಿ "ರೈಲ್ವೆ(ತಿದ್ದುಪಡಿ) ಮಸೂದೆ-2024" ಅಂಗೀಕಾರ

File Photo: PTI
ಹೊಸದಿಲ್ಲಿ: ಲೋಕಸಭೆಯಲ್ಲಿ ರೈಲ್ವೆ ಕಾನೂನುಗಳಿಗೆ ತಿದ್ದುಪಡಿ ತರುವ "ರೈಲ್ವೆ(ತಿದ್ದುಪಡಿ) ಮಸೂದೆ-2024"ನ್ನು ಅಂಗೀಕರಿಸಲಾಗಿದ್ದು, ನೂತನ ಕಾಯ್ದೆಯು ರೈಲ್ವೆ ಮಂಡಳಿಯ ಕಾರ್ಯನಿರ್ವಹಣೆಯ ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ರೈಲ್ವೆ(ತಿದ್ದುಪಡಿ) ಮಸೂದೆಯನ್ನು ಸದನದಲ್ಲಿ ಮಂಡಿಸಿದ ಐದು ತಿಂಗಳ ನಂತರ ಅಂಗೀಕರಿಸಲಾಗಿದೆ. ರೈಲ್ವೆ(ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.
ಇಂಡಿಯನ್ ರೈಲ್ವೆ ಬೋರ್ಡ್ ಕಾಯ್ದೆ-1905 ಅನ್ನು ರೈಲ್ವೆ ಆ್ಯಕ್ಟ್-1989ಗೆ ಸೇರಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ಇದು ಭಾರತೀಯ ರೈಲ್ವೆಯ ಕಾನೂನಿನ ಚೌಕಟ್ಟನ್ನು ಸರಳೀಕರಿಸಲಿದೆ ಎಂದು ವೈಷ್ಣವ್ ಹೇಳಿದ್ದಾರೆ.
ರೈಲ್ವೆ(ತಿದ್ದುಪಡಿ) ಮಸೂದೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ತಿದ್ದುಪಡಿಯು ಖಾಸಗೀಕರಣಕ್ಕೆ ಕಾರಣವಾಗುತ್ತದೆ ಎಂಬ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಈ ತಿದ್ದುಪಡಿಯು ಭಾರತೀಯ ರೈಲ್ವೆಯ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಆದರೆ, ಪ್ರತಿಪಕ್ಷಗಳು ಈ ವಿಚಾರದಲ್ಲಿ ಸುಳ್ಳು ನಿರೂಪಣೆಯನ್ನು ಹುಟ್ಟು ಹಾಕಿದೆ ಎಂದು ಹೇಳಿದ್ದಾರೆ.





