ಇಂಗ್ಲಿಷ್ ಮಾತನಾಡುವವರು ಶೀಘ್ರವೇ ನಾಚಿಕೆ ಪಡಲಿದ್ದಾರೆ: ಭಾಷಾ ವಿವಾದದ ನಡುವೆ ಅಮಿತ್ ಶಾ ಹೇಳಿಕೆ

ಅಮಿತ್ ಶಾ | PC : ANI
ಹೊಸದಿಲ್ಲಿ: ಹೊಗೆಯಾಡುತ್ತಿರುವ ಭಾಷಾ ವಿವಾದದ ನಡುವೆಯೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೇಶದಲ್ಲಿ ಇಂಗ್ಲಿಷ್ ಮಾತನಾಡುತ್ತಿರುವವರು ನಾಚಿಕೆ ಪಟ್ಟುಕೊಳ್ಳುವಂತಹ ದಿನಗಳು ಶೀಘ್ರವೇ ಬರಲಿವೆ ಎಂದು ಪ್ರತಿಪಾದಿಸುವ ಮೂಲಕ ಚರ್ಚೆಗೆ ಇನ್ನೊಂದು ವಿಷಯವನ್ನು ಗ್ರಾಸವಾಗಿಸಿದ್ದಾರೆ.
ಇಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಸ್ಥಳೀಯ ಭಾಷೆಗಳು ಭಾರತದ ಅನನ್ಯತೆಯ ಕೇಂದ್ರಬಿಂದುವಾಗಿವೆ ಮತ್ತು ವಿದೇಶಿ ಭಾಷೆಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಹೊಂದಿರಬೇಕು ಎಂದು ಒತ್ತಿ ಹೇಳಿದರು.
‘ಈ ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರವೇ ನಾಚಿಕೆ ಪಟ್ಟುಕೊಳ್ಳಲಿದ್ದಾರೆ. ಅಂತಹ ಸಮಾಜದ ಸೃಷ್ಟಿ ದೂರವಿಲ್ಲ. ನಮ್ಮ ದೇಶದ ಭಾಷೆಗಳು ನಮ್ಮ ಸಂಸ್ಕೃತಿಯ ಮುತ್ತುರತ್ನಗಳಾಗಿವೆ. ನಮ್ಮ ಭಾಷೆಗಳಿಲ್ಲದೆ ನಾವು ನಿಜವಾದ ಭಾರತೀಯರಾಗುವುದಿಲ್ಲ’ ಎಂದರು.
ಭಾರತದ ಭಾಷಾ ಪರಂಪರೆಯ ಮರುಸ್ಥಾಪನೆಗೆ ದೇಶಾದ್ಯಂತ ನವೀಕೃತ ಪ್ರಯತ್ನಗಳಿಗೆ ಕರೆ ನೀಡಿದ ಶಾ, ವಿಶ್ವಾದ್ಯಂತ ಇಂಗ್ಲಿಷ್ ಗುಲಾಮಗಿರಿಯ ಸಂಕೇತವಾಗಿ ತಿರಸ್ಕೃತಗೊಳ್ಳಲಿದೆ ಎಂದರು.
‘ನಮ್ಮ ದೇಶ,ನಮ್ಮ ಸಂಸ್ಕೃತಿ,ನಮ್ಮ ಇತಿಹಾಸ ಮತ್ತು ನಮ್ಮ ಧರ್ಮವನ್ನು ಅರ್ಥ ಮಾಡಿಕೊಳ್ಳಲು ಯಾವುದೇ ವಿದೇಶಿ ಭಾಷೆಯು ಸಾಲುವುದಿಲ್ಲ. ಅರೆಬೆಂದ ವಿದೇಶಿ ಭಾಷೆಗಳ ಮೂಲಕ ಸಂಪೂರ್ಣ ಭಾರತದ ಪರಿಕಲ್ಪನೆ ಸಾಧ್ಯವಿಲ್ಲ’ ಎಂದು ಹೇಳಿದ ಶಾ,‘ಈ ಹೋರಾಟವು ಎಷ್ಟೊಂದು ಕಷ್ಟಕರ ಎನ್ನುವುದು ನನಗೆ ಸಂಪೂರ್ಣವಾಗಿ ತಿಳಿದಿದೆ,ಆದರೆ ಭಾರತೀಯ ಸಮಾಜವು ಈ ಹೋರಾಟದಲ್ಲಿ ಗೆಲ್ಲುತ್ತದೆ ಎಂಬ ಸಂಪೂರ್ಣ ವಿಶ್ವಾಸವೂ ನನಗಿದೆ. ಮತ್ತೊಮ್ಮೆ ಆತ್ಮಗೌರವದೊಂದಿಗೆ ನಾವು ನಮ್ಮ ಸ್ವಂತ ಭಾಷೆಗಳಲ್ಲಿ ದೇಶವನ್ನು ನಡೆಸುತ್ತೇವೆ ಮತ್ತು ಜಗತ್ತನ್ನೂ ಮುನ್ನಡೆಸುತ್ತೇವೆ ’ ಎಂದರು.
ನೂತನ ಶಿಕ್ಷಣ ನೀತಿಯ ಭಾಗವಾಗಿರುವ ತ್ರಿಭಾಷಾ ಸೂತ್ರದ ಅನುಷ್ಠಾನದ ಮೂಲಕ ಕೇಂದ್ರವು ಹಿಂದಿ ಭಾಷೆಯನ್ನು ಹೇರುತ್ತಿದೆ ಎಂಬ ಕೆಲವು ದಕ್ಷಿಣದ ಮತ್ತು ಪ್ರತಿಪಕ್ಷ ಆಡಳಿತದ ರಾಜ್ಯಗಳ ಆರೋಪಗಳ ನಡುವೆಯೇ ಶಾ ಅವರ ಈ ಹೇಳಿಕೆಗಳು ಹೊರಬಿದ್ದಿವೆ.







