ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾದ CRPF ನ ಬಾಕಿ ಶುಲ್ಕ 13,300 ಕೋಟಿ ರೂ. ಮನ್ನಾ ಮಾಡಿ: ಅಮಿತ್ ಶಾಗೆ ಹೇಮಂತ್ ಸೊರೇನ್ ಪತ್ರ

ಹೇಮಂತ್ ಸೊರೇನ್ , ಅಮಿತ್ ಶಾ | PC : PTI
ರಾಂಚಿ: ಜಾರ್ಖಂಡ್ ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ 13,300 ಕೋಟಿ ರೂ. ಬಾಕಿ ಶುಲ್ಕವನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಒಂದು ವೇಳೆ ಇಷ್ಟು ಬೃಹತ್ ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸಿದರೆ, ರಾಜ್ಯದಲ್ಲಿನ ಅಭಿವೃದ್ಧಿ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗಲಿದೆ ಎಂದು ಅವರು ತಮ್ಮ ಪತ್ರದಲ್ಲಿ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ.
“ಭಯೋತ್ಪಾದಕತೆಯನ್ನು ಕಿತ್ತೊಗೆಯುವುದು ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡರ ಜಂಟಿ ಹೊಣೆಗಾರಿಕೆಯಾಗಿದೆ. ಹೀಗಾಗಿ, ಜಾರ್ಖಂಡ್ ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ಬಾಕಿ ಶುಲ್ಕವಾದ 13,299.69 ಕೋಟಿ ರೂ. ಅನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ನಾನು ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತೇನೆ” ಎಂದು ತಮ್ಮ ಪತ್ರದಲ್ಲಿ ಹೇಮಂತ್ ಸೊರೇನ್ ಕೋರಿದ್ದಾರೆ.
ಈ ಸಂಬಂಧ ಶುಕ್ರವಾರ ಸಂಜೆ ಪತ್ರ ಬರೆದಿರುವ ಹೇಮಂತ್ ಸೊರೇನ್, “ಸಹಕಾರ ಒಕ್ಕೂಟ ವ್ಯವಸ್ಥೆಯಡಿ ಬಾಕಿ ಮೊತ್ತವನ್ನು ಮನ್ನಾ ಮಾಡುವ ಸಹಕಾರ ಮತ್ತು ಸಕಾರಾತ್ಮಕ ಧೋರಣೆಯನ್ನು ಕೇಂದ್ರ ಸರಕಾರ ಪ್ರದರ್ಶಿಸಲಿದೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ” ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಹಣಕಾಸಿನ ಕೊರತೆ ಅನುಭವಿಸುತ್ತಿರುವುದರಿಂದ, ಜಾರ್ಖಂಡ್ ರಾಜ್ಯ ಎದುರಿಸುತ್ತಿರುವ ವಿವಿಧ ಸವಾಲುಗಳನ್ನೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.





