ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಕರ್ನಾಟಕಕ್ಕೆ ಕೇಂದ್ರದಿಂದ 4,164.95 ಕೋಟಿ ರೂ.ವಿತರಣೆೆ: ಅಮಿತ್ ಶಾ

ಅಮಿತ್ ಶಾ | Photo Credit : PTI
ಹೊಸದಿಲ್ಲಿ,ಡಿ.3: ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಈವರೆಗೆ 4,164.95 ಕೋಟಿ ರೂ.ಗಳನ್ನು ವಿತರಿಸಿದೆಯೆಂದು ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಬುಧವಾರ ತಿಳಿಸಿದ್ದಾರೆ.
ದೇಶಾದ್ಯಂತ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ(ಎನ್ಸಿಡಿಸಿ)ವು ನವೆಂಬರ್ 25ರವರೆಗೆ ಸಂಚಿತವಾಗಿ 4,67,455.66 ಕೋಟಿ ರೂ.ಗಳನ್ನು ವಿತರಿಸಿದೆ.
ಈ ಪೈಕಿ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ 4,164.95 ಕೋಟಿ ರೂ.ಗಳನ್ನು ವಿತರಿಸಲಾಗಿದೆಯೆಂದು ಶಾ ಅವರು ರಾಜ್ಯಸಭೆಗೆ ಬುಧವಾರ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸಹಕಾರಿ ದತ್ತಾಂಶಕೋಶ (ಡೇಟಾಬೇಸ್) ಪ್ರಕಾರ ಕರ್ನಾಟಕದಲ್ಲಿ ಒಟ್ಟು 46,798 ಸಹಕಾರಿ ಸೊಸೈಟಿಗಳಿದ್ದು, ಅವು ಒಟ್ಟು 2.38 ಕೋಟಿ ಸದಸ್ಯರನ್ನು ಹೊಂದಿವೆ ಎಂದವರು ಹೇಳಿದರು.
2021ರಲ್ಲಿ ಸಹಕಾರಿ ಸಚಿವಾಲಯವು ಸ್ಥಾಪನೆಯಾದಾಗಿನಿಂದ ಅದು ‘ಸಹಕಾರ್ ಸೆ ಸಮೃದ್ಧಿ’ಯ ಗುರಿಯನ್ನು ಸಾಕಾರಗೊಳಿಸಲು ಹಾಗೂ ಕರ್ನಾಟಕ ಸೇರಿದಂತೆ ದೇಶಾದ್ಯಂತ ಡೇರಿ, ಸಕ್ಕರೆ ಹಾಗೂ ಕೃಷಿ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅಮಿತ್ಶಾ ಸದನಕ್ಕೆ ವಿವರಿಸಿದರು.







