Assam | ನುಸುಳುಕೋರರನ್ನು ಗುರುತಿಸಲು ಬಿಜೆಪಿಗೆ ಮತ್ತೆ ಮತ ನೀಡಿ: ಚುನಾವಣಾ ಪೂರ್ವ ಭರವಸೆಯನ್ನು ಪುನರುಚ್ಚರಿಸಿದ ಅಮಿತ್ ಶಾ

ಅಮಿತ್ ಶಾ | Photo : PTI
ಗುವಾಹಟಿ: ಬಾಂಗ್ಲಾದೇಶದ ನುಸುಳುಕೋರರನ್ನು ಒಬ್ಬೊಬ್ಬರಂತೆ ಗುರುತಿಸಲು ಸತತ ಮೂರನೇ ಅವಧಿಗೆ ಬಿಜೆಪಿಗೆ ಮತ ನೀಡಿ ಎಂದು ಚುನಾವಣಾ ರಾಜ್ಯವಾದ ಅಸ್ಸಾಂನ ಮತದಾರರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.
2014ರಿಂದ ಹಾಗೂ ಅದಕ್ಕೂ ಮುಂಚಿನಿಂದಲೂ ಅಮಿತ್ ಶಾ ಅವರು ಅಸ್ಸಾಂ ಜನತೆಗೆ ನೀಡುತ್ತಾ ಬಂದಿರುವ ಚುನಾವಣಾ ಭರವಸೆಯಿದು.
ಪೂರ್ವ ಅಸ್ಸಾಂನಲ್ಲಿರುವ ದಿಬ್ರುಗಢ ಹಾಗೂ ನಂತರ ಉತ್ತರ ಅಸ್ಸಾಂನ ಧೇಮಜಿಯಲ್ಲಿ ಆಯೋಜನೆಗೊಂಡಿದ್ದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಮಾತನಾಡಿದ ಅಮಿತ್ ಶಾ, “ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನುಸುಳುವಿಕೆಯನ್ನು ತಡೆಗಟ್ಟಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಈಗಾಗಲೇ ರಾಜ್ಯದೊಳಗೆ ನುಸುಳಿರುವ ಮತ್ತು ಭೌಗೋಳಿಕ ಬೆದರಿಕೆ ಒಡ್ಡುತ್ತಿರುವ ನುಸುಳುಕೋರರನ್ನು ನಾವು ಗುರುತಿಸುತ್ತೇವೆ. ಬಿಜೆಪಿ ಸರಕಾರವನ್ನು ಮೂರನೇ ಬಾರಿಗೆ ಚುನಾಯಿಸಿ. ಈಗಾಗಲೇ ರಾಜ್ಯದಲ್ಲಿ ನೆಲೆಸಿರುವ ಯಾವುದೇ ನುಸುಳುಕೋರನನ್ನೂ ನಾವು ಬಿಡುವುದಿಲ್ಲ. ಒಬ್ಬೊಬ್ಬರನ್ನೇ ಗುರುತಿಸಿ, ರಾಜ್ಯದಿಂದ ಗಡೀಪಾರು ಮಾಡಲಾಗುತ್ತದೆ. ಈ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ” ಎಂದು ಘೋಷಿಸಿದರು.
ದಿಬ್ರುಗಢದಲ್ಲಿ ಎರಡನೇ ವಿಧಾನಸಭೆ ಕಟ್ಟಡಕ್ಕೆ ಅಡಿಗಲ್ಲು ಹಾಕಿದ ಅಮಿತ್ ಶಾ, ಧೇಮಜಿಯಲ್ಲಿ ಆಯೋಜನೆಗೊಂಡಿದ್ದ ಅಸ್ಸಾಂನ ಪ್ರಮುಖ ಆದಿವಾಸಿ ಸಮುದಾಯವಾದ ಮಿಸಿಂಗ್ ಸಮುದಾಯದ 10ನೇ ಮಿಸಿಂಗ್ ಯುವ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
“ಹಲವು ದಶಕಗಳ ಕಾಲ ಕಾಂಗ್ರೆಸ್ ಪಕ್ಷವು ಅಸ್ಸಾಂನಲ್ಲಿ ನುಸುಳುವಿಕೆಗೆ ಅವಕಾಶ ನೀಡಿತು ಮತ್ತು ಅಧಿಕಾರದಲ್ಲಿರಲು ಅವರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿತು. ಆದರೆ ಇಂದು ನಮ್ಮ ಸರಕಾರವು 1.26 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಹಾಗೂ ಸರಕಾರಿ ಭೂಮಿಯನ್ನು ಬಾಂಗ್ಲಾದೇಶದ ನುಸುಳುಕೋರರಿಂದ ಮುಕ್ತಗೊಳಿಸಿದೆ” ಎಂದು, ಬಂಗಾಳಿ ಭಾಷಿಕ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ತೆರವು ಕಾರ್ಯಾಚರಣೆಯನ್ನು ಉಲ್ಲೇಖಿಸಿ ಹೇಳಿದರು. ಅವರನ್ನು ಬಿಜೆಪಿ ನುಸುಳುಕೋರರು ಎಂದು ಪರಿಗಣಿಸಿದೆ.
“ನುಸುಳುಕೋರರು ಶ್ರೀಮಂತ ಸಂಕರ್ ದೇವ್ ಅವರ ಜನ್ಮಭೂಮಿ ಹಾಗೂ ಕಾಝಿರಂಗ ರಾಷ್ಟ್ರೀಯ ಉದ್ಯಾನವನವನ್ನೂ ಬಿಟ್ಟಿಲ್ಲ. ಅವರು ಘೇಂಡಾಮೃಗಗಳನ್ನೂ ಗುರಿಯಾಗಿಸಿಕೊಂಡು ಅವುಗಳನ್ನು ಹತ್ಯೆಗೈದಿದ್ದಾರೆ. ಭೌಗೋಳಿಕ ಬೆದರಿಕೆ ನಿಲ್ಲಲೇಬೇಕು. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ಅಸ್ಸಾಂ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಹೇಳಿದರು.







