‘ಒಂದು ದೇಶ, ಒಂದು ಚುನಾವಣೆ’ ಸಮಿತಿ ಸೇರಲು ನಿರಾಕರಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ

ಅಧೀರ್ ರಂಜನ್ ಚೌಧರಿ (PTI)
ಹೊಸದಿಲ್ಲಿ: 'ಒಂದು ದೇಶ, ಒಂದು ಚುಣಾವಣೆ' ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಗೆ ಸೇರಲು ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ನಿರಾಕರಿಸಿದ್ದಾರೆ.
ಗೃಹಸಚಿವ ಅಮಿತ್ ಶಾ, ಚೌಧರಿ, ರಾಜ್ಯಸಭೆಯ ವಿರೋಧಪಕ್ಷದ ಮಾಜಿ ಮುಖಂಡ ಗುಲಾಂ ನಬಿ ಆಝಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್, ಸಂವಿಧಾನತಜ್ಞ ಹಾಗೂ ವಕೀಲ ಹರೀಶ್ ಸಾಳ್ವೆ, ಲೋಕಸಭೇಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ.ಕಶ್ಯಪ್, ನಿವೃತ್ತ ವಿಚಕ್ಷಣಾ ಆಯುಕ್ತ ಸಂಜಯ್ ಕೊಠಾರಿ ಅವರನ್ನು ಸಮಿತಿಗೆ ನೇಮಕ ಮಾಡಲಾಗಿತ್ತು. ಕಾನೂನು ಸಚಿವ ಅರ್ಜುನ್ ರಾಂ ಮೇಘ್ವಾಲ್ ಅವರು ವಿಶೇಷ ಆಹ್ವಾನಿತರಾಗಿದ್ದರು. ಕಾನೂನು ಕಾರ್ಯದರ್ಶಿ ನಿತಿನ್ ಚಂದ್ರ ಸಮಿತಿಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದರು.
ಈ ಪ್ರಮುಖ ಸಮಿತಿಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೇರಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಮಿತಿಯ ಸಂಯೋಜನೆ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಪಕ್ಷ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ "ಈ ಇಡೀ ಕಸರತ್ತು ಕಣ್ಣೊರಸುವ ತಂತ್ರ ಎಂಬ ಭಯ ನನ್ನನ್ನು ಕಾಡುತ್ತಿದೆ" ಎಂದು ಹೇಳಿ ಸಮಿತಿಗೆ ಸೇರಲು ಚೌಧರಿ ನಿರಾಕರಿಸಿದ್ದಾರೆ. ಈ ಸಂಬಂಧ ಅಮಿತ್ ಶಾ ಅವರಿಗೆ ಅಧೀರ್ ಪತ್ರ ಬರೆದಿದ್ದಾರೆ.
ಕಾನೂನು ಸಚಿವಾಲಯ ನೀಡಿದ ಅಧಿಸೂಚನೆಯಲ್ಲಿ, "ಈ ಸಮಿತಿ ತಕ್ಷಣದಿಂದ ಕಾರ್ಯ ನಿರ್ವಹಿಸಲಿದೆ ಹಾಗೂ ಸಾಧ್ಯವಾದಷ್ಟು ಬೇಗ ಶಿಫಾರಸ್ಸುಗಳನ್ನು ಸಲ್ಲಿಸಲಿದೆ" ಎಂದು ಹೇಳಲಾಗಿದೆ. ಆದರೆ ವರದಿ ಸಲ್ಲಿಸಲು ಯಾವುದೇ ಸಮಯ ನಿಗದಿಪಡಿಸಿಲ್ಲ.
‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ, ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಏಕಕಾಲದಲ್ಲಿ ಚುನಾವಣೆಯನ್ನು ನಡೆಸಲು ಅಗತ್ಯವಿರುವ ಇತರ ಕಾನೂನುಗಳಿಗೆ ಸೂಕ್ತ ತಿದ್ದುಪಡಿಗಳನ್ನು ತರುವುದು ಮತ್ತಿತರ ವಿಚಾರಗಳನ್ನು ಪರಿಶೀಲಿಸಿ ಶಿಫಾರಸ್ಸು ಮಾಡುವ ಹೊಣೆಯನ್ನು ಸಮಿತಿಗೆ ವಹಿಸಲಾಗಿದೆ. ಈ ಸಂವಿಧಾನ ತಿದ್ದುಪಡಿಗೆ ರಾಜ್ಯಗಳ ಅನುಮೋದನೆ ಬೇಕೇ ಎಂಬ ಬಗ್ಗೆಯೂ ಸಮಿತಿ ಶಿಫಾರಸ್ಸು ಮಾಡಲಿದೆ. ಏಕಕಾಲಕ್ಕೆ ನಡೆಯುವ ಚುನಾವಣೆ ಸಂದರ್ಭದಲ್ಲಿ ಅತಂತ್ರ ಲೋಕಸಭೆ, ಅವಿಶ್ವಾಸ ಗೊತ್ತುವಳಿ ಸ್ವೀಕಾರ, ಭಿನ್ನಮತ ಅಥವಾ ಇಂಥ ಇತರ ಅಂಶಗಳ ಬಗ್ಗೆಯೂ ಸಮಿತಿ ಅಧ್ಯಯನ ನಡೆಸಿ ಶಿಫಾರಸ್ಸು ಮಾಡಬೇಕಿದೆ.







