“ಅಮಿತ್ ಶಾ ಬರೆದುಕೊಡುತ್ತಾರೆ, ಪ್ರಧಾನಿ ಕಾರ್ಯಾಲಯ ರವಾನಿಸುತ್ತದೆ, ಮಾಧ್ಯಮ ಪ್ರಸಾರ ಮಾಡುತ್ತದೆ”: ಚುನಾವಣೋತ್ತರ ಸಮೀಕ್ಷೆಗಳನ್ನು ತಳ್ಳಿ ಹಾಕಿದ ತೇಜಸ್ವಿ ಯಾದವ್

ತೇಜಸ್ವಿ ಯಾದವ್ | Photo Credit : PTI
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ NDA ಭಾರಿ ಬಹುಮತ ಗಳಿಸಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳನ್ನು ತಳ್ಳಿ ಹಾಕಿರುವ ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಹಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, “ಅಮಿತ್ ಶಾ ಬರೆದುಕೊಡುತ್ತಾರೆ, ಪ್ರಧಾನಿ ಕಾರ್ಯಾಲಯ ರವಾನಿಸುತ್ತದೆ ಹಾಗೂ ಅದನ್ನು ಮಾಧ್ಯಮಗಳು ಪ್ರಸಾರ ಮಾಡುತ್ತವೆ” ಎಂದು ವ್ಯಂಗ್ಯವಾಡಿದ್ದಾರೆ.
ಬುಧವಾರ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, “2020ರ ಚುನಾವಣೆಗೆ ಹೋಲಿಸಿದರೆ ಈ ಬಾರಿ 72 ಲಕ್ಷಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ. ಅಧಿಕ ಪ್ರಮಾಣದ ಮತ ಚಲಾವಣೆಯು ಆಡಳಿತವಿರೋಧಿ ಅಲೆಯನ್ನು ಸೂಚಿಸುತ್ತಿದೆಯೇ ಹೊರತು, ನಿತೀಶ್ ಕುಮಾರ್ ಗೆ ಬೆಂಬಲವನ್ನಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಈ ಮತಗಳನ್ನು ನಿತೀಶ್ ಕುಮಾರ್ ರನ್ನು ರಕ್ಷಿಸಲು ಚಲಾಯಿಸಿರುವುದಲ್ಲ; ಸರಕಾರವನ್ನು ಬದಲಿಸಲು ಚಲಾಯಿಸಿರುವುದು. ಸರಕಾರ ಬದಲಾಗಲಿದೆ” ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷಗಳ ಮೈತ್ರಿಕೂಟ ಭಾರಿ ಬಹುಮತ ಪಡೆಯಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದು, NDA ಮತ ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸಲು ಯತ್ನಿಸುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.





