Uttar Pradesh | ಝಾನ್ಸಿ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡ Amitabh Bachchan ಹೆಸರು!

ಅಮಿತಾಭ್ ಬಚ್ಚನ್ | Photo Credit : PTI
ಲಕ್ನೊ: ಉತ್ತರ ಪ್ರದೇಶದ ಮತಪಟ್ಟಿಗಳಲ್ಲಿ ಭಾರಿ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಿಗೇ, ಝಾನ್ಸಿ ಮತದಾರರ ಪಟ್ಟಿಯಲ್ಲಿ ಹಿರಿಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹೆಸರು ಕಾಣಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಶೇಷ ಮಧ್ಯಂತರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ. ಈ ಮತಪಟ್ಟಿಯಲ್ಲಿ ಅಮಿತಾಭ್ ಬಚ್ಚನ್ ಅವರ ದಿವಂಗತ ತಂದೆ ಹರಿವಂಶ್ ರಾಯ್ ಅವರ ಹೆಸರೂ ಕಾಣಿಸಿಕೊಂಡಿದ್ದು, ಅವರ ಮನೆಯ ಸಂಖ್ಯೆ 54 ಎಂದು ನಮೂದಾಗಿದೆ.
ಅಮಿತಾಭ್ ಬಚ್ಚನ್ ಹಾಗೂ ಅವರ ತಂದೆಯ ಹೆಸರು ಝಾನ್ಸಿ ಜಿಲ್ಲೆಯ ಕಚಿಯಾನ ಪ್ರದೇಶದ ಮತಪಟ್ಟಿಯಲ್ಲಿ ನೋಂದಣಿಯಾಗಿದೆ. ಅಧಿಕೃತ ದಾಖಲೆಗಳ ಪ್ರಕಾರ, 2003ರಲ್ಲಿ ಅಮಿತಾಭ್ ಬಚ್ಚನ್ ಈ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ನಾವು ಅಮಿತಾಭ್ ಬಚ್ಚನ್ ರನ್ನು ಸಿನಿಮಾಗಳಲ್ಲಿ ನೋಡಿದ್ದೇವೆಯೇ ಹೊರತು, ಅವರೆಂದೂ ನಮ್ಮ ನೆರೆಹೊರೆಯಲ್ಲಿ ಕಂಡು ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ನಮ್ಮ ಕಾಲನಿಯಲ್ಲಿ ಅವರೆಂದೂ ವಾಸವಿರಲಿಲ್ಲ ಎಂದೂ ಅವರು ಒತ್ತಿ ಹೇಳಿದ್ದಾರೆ.
ಕಚಿಯಾನ ಮತದಾರರ ಪಟ್ಟಿಯಲ್ಲಿ ಹರಿವಂಶ್ ರಾಯ್ ಅವರ ಪುತ್ರ ಎಂದು ಅಮಿತಾಭ್ ಬಚ್ಚನ್ ಹೆಸರು ನಮೂದಾಗಿದ್ದು, ಮತಪಟ್ಟಿಯಲ್ಲಿ 76ನೇ ಕ್ರಮಾಂಕದಲ್ಲಿ ಉಲ್ಲೇಖವಾಗಿದೆ. ಅವರ ಮನೆಯ ಸಂಖ್ಯೆ 54 ಎಂದು ದಾಖಲಾಗಿದೆ. ಈ ವಿವರಗಳು ಸ್ಥಳೀಯರನ್ನು ಸೋಜಿಗಕ್ಕೀಡು ಮಾಡಿದ್ದು, ಸದ್ಯ ಅವರಿಗೀಗ 86 ವರ್ಷವಾಗಿದ್ದರೂ, ಎರಡು ದಶಕಗಳ ಹಿಂದೆ ಅವರ ವಯಸ್ಸು 76 ಆಗಿದ್ದದ್ದು ಹೇಗೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮನೆ ಮಾಡಿದೆ.
ಇದಲ್ಲದೆ, ನಾವು 2003ರಲ್ಲಿ ಮತದಾನ ಮಾಡಿದ್ದರೂ, ನಮ್ಮ ಹೆಸರುಗಳು ಪರಿಷ್ಕೃತ ಮತಪಟ್ಟಿಗಳಿಂದ ನಾಪತ್ತೆಯಾಗಿವೆ ಎಂದು ಹಲವು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಈ ಬೆಳವಣಿಗೆಗಳಿಂದಾಗಿ ಮತಪಟ್ಟಿಗಳ ನಿಖರತೆ ಹಾಗೂ ಸದ್ಯ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳೆದ್ದಿವೆ.







