ಕಲಾಪಗಳ ನಿರ್ವಹಣೆಗೆ ಅಡ್ಡಿಪಡಿಸುವುದು ದೇಶಕ್ಕೆ ಹಿತವಲ್ಲ: ಅಮಿತ್ ಶಾ

ಅಮಿತ್ ಶಾ | PC : PTI
ಹೊಸದಿಲ್ಲಿ,ಆ.24: ಸಂಸತ್ ಅಥವಾ ವಿಧಾನಸಭೆಗಳು ಚರ್ಚೆ ಹಾಗೂ ಸಂವಾದದ ಸ್ಥಳಗಳಾಗಿವೆ. ಆದರೆ ಸಂಕುಚಿತ ರಾಜಕೀಯ ಲಾಭಗಳಿಗಾಗಿ ಸರಕಾರವನ್ನು ವಿರೋಧಿಸುವ ಹೆಸರಿನಲ್ಲಿ ಸದನದ ಕಲಾಪಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡದಿರುವುದು ದೇಶದ ಹಿತಕ್ಕೆ ಒಳ್ಳೆಯದಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ರವಿವಾರ ನಡೆದ ಅಖಿಲ ಭಾರತ ಸ್ಪೀಕರ್ ಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು. ವಿರೋಧಗಳು ಯಾವತ್ತೂ ಸಂಯಮದಿಂದ ಕೂಡಿರಬೇಕು. ಆದರೆ ವಿರೋಧದ ಹೆಸರಿನಲ್ಲಿ ದಿನದಿಂದ ದಿನಕ್ಕೆ, ಕಲಾಪದಿಂದ ಕಲಾಪಕ್ಕೆ ಸದನವು ಕಾರ್ಯನಿರ್ವಹಿಸಲು ಅವಕಾಶ ನೀಡದೆ ಇರುವುದು ಒಳ್ಳೆಯದಲ್ಲ. ಈ ಬಗ್ಗೆ ದೇಶದ ಜನತೆ ಹಾಗೂ ಚುನಾಯಿತ ಪ್ರತಿನಿಧಿಗಳು ಚಿಂತಿಸಬೇಕಾಗಿದೆ ’’ ಎಂದವರು ಹೇಳಿದರು.
‘‘ಸದನಗಳಲ್ಲಿ ನಡೆಸುವ ಎಲ್ಲಾ ಚರ್ಚೆಗಳು ಪ್ರಜ್ಞಾವಂತಿಕೆಯಿಂದ ಕೂಡಿರಬೇಕು ಹಾಗೂ ಸ್ಪೀಕರ್ ಅವರ ಹುದ್ದೆಯ ಘನತೆ ಹಾಗೂ ಗೌರವವನ್ನು ಹೆಚ್ಚಿಸುವತ್ತ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕೇಂದ್ರ ಗೃಹ ಸಚಿವರು ಕರೆ ನೀಡಿದರು. ಸದನಗಳು ಜನತೆಯ ಸಮಸ್ಯೆಗಳನ್ನು ಪ್ರಸ್ತಾವಿಸುವ ನಿಷ್ಪಕ್ಷ ವೇದಿಕೆಯಾಗುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು.’’ ಎಂದರು.
ಪುರಾಣಗ್ರಂಥ ಮಹಾಭಾರತದಲ್ಲಿ ದ್ರೌಪದಿಯನ್ನು ಹಸ್ತಿನಾಪುರದ ಅಸ್ಥಾನದಲ್ಲಿ ಅಪಮಾನಿಸಿದ ಸನ್ನಿವೇಶವನ್ನು ಉಲ್ಲೇಖಿಸಿದ ಶಾ, ಸದನ ಘನತೆಯೊಂದಿಗೆ ರಾಜಿಮಾಡಿಕೊಂಡಲ್ಲಿ ಇಡೀ ದೇಶವು ಘೋರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಒಂದು ವೇಳೆ ಸಂಸತ್ ಅಥವಾ ಶಾಸಕಾಂಗ ಸಭೆಗಳಲ್ಲಿ ಚರ್ಚೆಗಳು ಇಲ್ಲದೇ ಇದ್ದಲ್ಲಿ ಅವು ಕೇವಲ ನಿರ್ಜೀವ ಕಟ್ಟಡಗಳಾಗುತ್ತವೆ ಎಂದರು.
ಭಾರತದ ಕೇಂದ್ರೀಯ ಶಾಸನ ಸಭೆಗೆ ಪ್ರಪ್ರಥಮ ಚುನಾಯಿತ ಸ್ಪೀಕರ್ ಆಗಿ ಆಯ್ಕೆಯಾಗಿದ್ದ ವಿಭಾಯಿ ಪಟೇಲ್ ಅವರಿಗೆ ಗೃಹ ಸಚಿವರು ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.
‘‘ಇಂದಿಗೆ ಸರಿಯಾಗಿ 100 ವರ್ಷಗಳ ಹಿಂದೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ವಿಠ್ಠಲ್ ಭಾಯಿ ಪಟೇಲ್ ಅವರನ್ನು ಕೇಂದ್ರೀಯ ಶಾಸಕಾಂಗ ಸಭೆಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದರೊಂದಿಗೆ ಭಾರತದ ಶಾಸಕಾಂಗ ಸಭೆಯ ಇತಿಹಾಸ ಆರಂಭಗೊಂಡಿತು’’ ಎಂದು ಅಮಿತ್ ಶಾ ಅವರು ಸ್ಮರಿಸಿಕೊಂಡರು.







