ಸಹೋದರ, ಸೋದರಳಿಯನನ್ನು ಗುಂಡು ಹಾರಿಸಿ ಹತ್ಯೆಗೈದ ಮಾಜಿ ಯೋಧ

ಸಾಂದರ್ಭಿಕ ಚಿತ್ರ.
ಭೋಪಾಲ: ಮಾಜಿ ಯೋಧನೋರ್ವ ತನ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಸಂದರ್ಭ ಮಧ್ಯೆ ಪ್ರವೇಶಿಸಿದ ಸಹೋದರ ಹಾಗೂ ಸೋದರಳಿಯನನ್ನು ಗುಂಡಿಕ್ಕಿ ಹತ್ಯೆಗೈದ ಹಾಗೂ ಪುತ್ರಿಯನ್ನು ಗುಂಡಿಕ್ಕಿ ಗಾಯಗೊಳಿಸಿದ ಘಟನೆ ಇಲ್ಲಿನ ಸಾಗರದ ಲಾಲೆಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಆರೋಪಿಯನ್ನು ರಾಮಧರ್ ತಿವಾರಿ (50) ಎಂದು ಗುರುತಿಸಲಾಗಿದೆ. ತಿವಾರಿ ತನ್ನ ಪತ್ನಿ ಸಂಧ್ಯಾರೊಂದಿಗೆ ಜಗಳವಾಡುತ್ತಿದ್ದ ಸಂದರ್ಭ ಆತನ ಹಿರಿಯ ಸಹೋದರ ರಾಮ್ಮಿಲನ್ (62) ಹಾಗೂ ಸೋದರಳಿಯ ಅಜ್ಜು (36) ಹಾಗೂ ಪುತ್ರಿ ವರ್ಷಾ (24) ಸಮಾಧಾನಪಡಿಸಲು ಮಧ್ಯೆ ಪ್ರವೇಶಿಸಿದ್ದರು.
ಕೋಪದ ಭರದಲ್ಲಿ ತಿವಾರಿ ತನ್ನ ಸಹೋದರ, ಸೋದರಳಿಯ ಹಾಗೂ ಪುತ್ರಿಯ ಮೇಲೆ ಗುಂಡು ಹಾರಿಸಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಬುಂಧೇಲಖಂಡ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಅವರಲ್ಲಿ ರಾಮ್ಮಿಲನ್ ಹಾಗೂ ಅಜ್ಜು ಮೃತಪಟ್ಟಿದ್ದಾರೆ ಎಂದು ಸನೋಧಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್.ಪಿ. ದುಬೆ ಹೇಳಿದ್ದಾರೆ. ಘಟನೆ ನಡೆದ ಕೂಡಲೇ ತಿವಾರಿ ಕಾರು ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಆದರೆ, ಅವರನ್ನು ಕೆಲವೇ ಗಂಟೆಗಳಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.







