ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ | ಮೊದಲ ಬಾರಿ ಅಂಡಮಾನ್ - ನಿಕೋಬಾರ್ ನಲ್ಲಿ ಈಡಿ ದಾಳಿ

PC ; Enforcement Directorate
ಹೊಸದಿಲ್ಲಿ, ಜು. 31: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಹಾಗೂ ನಿಕೋಬಾರ್ ನ ಮಾಜಿ ಸಂಸತ್ ಸದಸ್ಯರೊಬ್ಬರು ಭಾಗಿಯಾದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಈಡಿ) ಮೊದಲ ಬಾರಿಗೆ ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ ದಾಳಿ ನಡೆಸಿದೆ.
ಅಂಡಮಾನ್ ನಿಕೋಬಾರ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ (ಎಎನ್ಎಸ್ಸಿಬಿ)ನಲ್ಲಿ ನಡೆದ ಅತಿದೊಡ್ಡ ಅಕ್ರಮ ಆರೋಪದ ಕುರಿತ ತಮ್ಮ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ಗುರುವಾರ ಪೋರ್ಟ್ ಬ್ಲೇರ್ ನ ಸುತ್ತಮುತ್ತ 9 ಸ್ಥಳಗಳು ಹಾಗೂ ಕೋಲ್ಕತ್ತಾದ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದರು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನಿಯಮಗಳ ಅಡಿಯಲ್ಲಿ ಈ ದಾಳಿ ನಡೆಸಲಾಗಿದೆ.
ಈ ಪ್ರಕರಣ ಬ್ಯಾಂಕ್ ನ ಮಾಜಿ ಉಪಾಧ್ಯಕ್ಷ, 2019 ಹಾಗೂ 2024ರ ನಡುವೆ ಅಂಡಮಾನ್ ನಿಕೋಬಾರ್ ಅನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಕಾಂಗ್ರೆಸ್ ರಾಜಕಾರಣಿ ಕುಲದೀಪ್ ಶರ್ಮಾ ಅವರನ್ನು ಕೇಂದ್ರೀಕರಿಸಿದೆ.
‘‘ಜಾರಿ ನಿರ್ದೇಶನಾಲಯ(ಈಡಿ) ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಮೊದಲ ಬಾರಿ ನಡೆಸುತ್ತಿರುವ ದಾಳಿ ಇದಾಗಿದೆ. ದಾಳಿಯ ಸಂದರ್ಭ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಡಮಾನ್ ಹಾಗೂ ನಿಕೋಬಾರ್ ಪೊಲೀಸ್ ನ ಅಪರಾಧ ಹಾಗೂ ಆರ್ಥಿಕ ಅಪರಾಧಗಳ ದಳ ದಾಖಲಿಸಿದ ಎಫ್ಐಆರ್ ನ ಆಧಾರದಲ್ಲಿ ಈ ಹಣ ಅಕ್ರಮ ವರ್ಗಾವಣೆಯ ತನಿಖೆ ನಡೆಯುತ್ತಿದೆ. ಇದರಲ್ಲಿ ಶರ್ಮಾ ಅವರ ಪಾತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಕುಲದೀಪ್ ರಾಯ್ ಆ ಆರೋಪದ ಕುರಿತಂತೆ ಇದುವರೆಗೆ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ವಿಚಾರಣೆಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದ ಹಲವು ವ್ಯಕ್ತಿಗಳಿಗೆ ಜಾರಿ ನಿರ್ದೇಶನಾಲಯ(ಈಡಿ) ಸಮನ್ಸ್ ನೀಡುವ ನಿರೀಕ್ಷೆ ಇದೆ.







