ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಚಂಡಮಾರುತದ ಮುನ್ನೆಚ್ಚರಿಕೆ : ಅ.23ರವರೆಗೆ ಭಾರೀ ಮಳೆ ಬೀಳುವ ಸಾಧ್ಯತೆ

ಹೊಸದಿಲ್ಲಿ, ಅ. 20: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ಅಕ್ಟೋಬರ್ 21ರಿಂದ ಅದು ತೀವ್ರಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಮುನ್ನೆಚ್ಚರಿಕೆ ನೀಡಿದ ಬಳಿಕ ಸ್ಥಳೀಯ ಬಂದರು, ಈ ಹವಾಮಾನ ಅಕ್ಟೋಬರ್ 23ರವರೆಗೆ ಮಳೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.
‘‘ನಿಕೋಬಾರ್ ದ್ವೀಪಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆ (7-11 ಎಂಎಂ)ಬೀಳುವ ಸಾಧ್ಯತೆ ಇದೆ. ಅಕ್ಟೋಬರ್ 21, 22 ಹಾಗೂ 23ರಂದು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿ (ಗಂಟೆಗೆ 40-50 ಕಿ.ಮೀ.) ವಿಂಚಿನೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 24 ಹಾಗೂ 25ರಂದು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿ (ಗಂಟೆಗೆ 40ರಿಂದ 50 ಕಿ.ಮೀ.) ಹಾಗೂ ಮಿಂಚಿನೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಮುಂದಿನ 5 ದಿನಗಳು ಸಮುದ್ರ ಪ್ರಕ್ಷುಬ್ದವಾಗಲಿದೆ. ಅಕ್ಟೋಬರ್ 24ರ ವರೆಗೆ ಅಂಡಮಾನ್ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.





