ಸೋನಿಯಾ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲು

ಕೆ.ನಾರಾಯಣ ಸ್ವಾಮಿ (Photo: thenewsminute.com)
ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಕೆ.ನಾರಾಯಣ ಸ್ವಾಮಿ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತೆಲಂಗಾಣ ಕಾಂಗ್ರೆಸ್ ನ ಉಪಾಧ್ಯಕ್ಷ ಮಲ್ಲು ರವಿ ಅವರು ನೀಡಿದ್ದ ದೂರನ್ನು ಆಧರಿಸಿ ಬೇಗಮ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿಯವರ ತಂದೆಯಾದ ವೈ.ಎಸ್.ರಾಜಶೇಖರ್ ರೆಡ್ಡಿ ಸಾವಿನಲ್ಲಿ ಸೋನಿಯಾ ಗಾಂಧಿಯವರ ಕೈವಾಡವಿದೆ ಎಂಬ ಹೇಳಿಕೆಯನ್ನು ನಾರಾಯಣಸ್ವಾಮಿ ನೀಡಿದ್ದರು. ಸೆಪ್ಟೆಂಬರ್ 2, 2009ರಂದು ವೈ.ಎಸ್.ರಾಜಶೇಖರ್ ರೆಡ್ಡಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ ಅವರು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ಕಾನೂನು ಸಲಹೆ ಪಡೆದು ಹಾಗೂ ನಾರಾಯಣಸ್ವಾಮಿ ನೀಡಿದ್ದ ಹೇಳಿಕೆಯ ವಿಡಿಯೊ ತುಣುಕನ್ನು ವಿಶ್ಲೇಷಣೆಗೊಳಪಡಿಸಿದ ನಂತರ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿಭಂಗಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಹಾಗೂ ಸೆಕ್ಷನ್ 505 (ಸಾರ್ವಜನಿಕ ತೊಂದರೆಯನ್ನುಂಟು ಮಾಡುವಂತಹ ಹೇಳಿಕೆಗಳು) ಅಡಿ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲ್ಲು ರವಿ ಅವರು ದೂರು ನೀಡಿದ ನಂತರವೂ ನಾರಾಯಣಸ್ವಾಮಿ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದರು. ವೈ.ಎಸ್.ರಾಜಶೇಖರ್ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ಕುರಿತು ತನಗೆ ಮಾತ್ರವಲ್ಲದೆ ಇಡೀ ಆಂಧ್ರಪ್ರದೇಶದ ಜನತೆಗೆ ಅನುಮಾನವಿದೆ ಎಂದು ಅವರು ಪ್ರತಿಪಾದಿಸಿದ್ದರು. ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಸಾವಿನ ಹಿಂದೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ಸೋನಿಯಾ ಗಾಂಧಿಯವರ ಕೈವಾಡವಿದೆ ಎಂದೂ ಅವರು ಆರೋಪಿಸಿದ್ದರು.







