Andhra Pradesh | ONGC ತೈಲ ಬಾವಿಯಲ್ಲಿ ಅನಿಲ ಸೋರಿಕೆ; ಬೆಂಕಿ ಅವಘಡ, ಗ್ರಾಮದ ಜನರ ಸ್ಥಳಾಂತರ

ಸಾಂದರ್ಭಿಕ ಚಿತ್ರ
ಅಮರಾವತಿ, ಜ. 5: ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಗ್ರಾಮೊವೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಒಎನ್ಜಿಸಿ ತೈಲ ಬಾವಿಯಿಂದ ಸೋಮವಾರ ಅನಿಲ ಸೋರಿಕೆಯಾದ ಬಳಿಕ ಬೆಂಕಿ ವ್ಯಾಪಿಸಿಕೊಂಡಿದ್ದು, ಅಲ್ಲಿನ ಜನರನ್ನು ಸಾಮೂಹಿಕವಾಗಿ ಸ್ಥಳಾಂತರಗೊಳಿಸಲಾಗಿದೆ.
ಈ ತೈಲ ಬಾವಿ ಕೋನಸೀಮಾದ ರಸೋಲ್ ಪ್ರದೇಶದಲ್ಲಿರುವ ಇರುಸುಮಂಡಾ ಗ್ರಾಮದಲ್ಲಿದೆ. ತೈಲ ಬಾವಿಯಲ್ಲಿ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಂಡ ಬಳಿಕ ವರ್ಕ್ಓವರ್ ರಿಗ್ ಬಳಸಿ ದುರಸ್ಥಿ ಕಾರ್ಯ ನಡೆಯುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ದುರಸ್ಥಿಯ ಸಂದರ್ಭ ಕಚ್ಚಾ ತೈಲ ಬೆರೆತ ಅನಿಲ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಯಿತು. ಅದು ಆಕಾಶದೆತ್ತರಕ್ಕೆ ಹಾರಿತು.
ಸೋರಿಕೆಯಾದ ಅನಿಲಕ್ಕೆ ಕೂಡಲೇ ಬೆಂಕಿ ಹತ್ತಿಕೊಂಡು ಜ್ವಾಲೆಗಳು ಆ ಪ್ರದೇಶದಲ್ಲಿ ಆವರಿಸಿಕೊಂಡವು. ಇದರಿಂದ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಆತಂಕಿತರಾದರು. ಅನಿಲದ ದಟ್ಟ ಮೋಡ ಹಾಗೂ ಹೊಗೆ ದಟ್ಟ ಹಿಮದಂತೆ ಇರುಸುಮಂಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆವರಿಸಿಕೊಂಡಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷತಾ ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಘೋಷಣೆಗಳನ್ನು ಮಾಡಿದರು. ಬೆಂಕಿ ಹರಡುವುದನ್ನು ತಡೆಯಲು ವಿದ್ಯುತ್ ಬಳಕೆ ಮಾಡದಂತೆ, ಉಪಕರಣಗಳನ್ನು ಆನ್ ಮಾಡದಂತೆ, ಒಲೆಗಳನ್ನು ಉರಿಸದಂತೆ ಅವರು ಸಮೀಪದ ಮೂರು ಹಳ್ಳಿಗಳ ನಿವಾಸಿಗಳಿಗೆ ಸೂಚನೆಗಳನ್ನು ನೀಡಿದರು.
ಸ್ಥಳದಿಂದ ಕೂಡಲೇ ತೆರವುಗೊಳ್ಳುವಂತೆ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯಾಡಳಿತ ಗ್ರಾಮಸ್ಥರನ್ನು ಆಗ್ರಹಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಹಲವು ನಿವಾಸಿಗಳು ಮನೆ ತ್ಯಜಿಸಿದರು. ಪರಿಸ್ಥಿತಿ ಹದಗೆಡುತ್ತಿದ್ದಂತೆ ಕಲವರು ತಮ್ಮ ಜಾನುವಾರುಗಳೊಂದಿಗೆ ತೆರಳಿದರು.
ಸೋರಿಕೆ ನಿಯಂತ್ರಿಸಲು ಹಾಗೂ ಬೆಂಕಿಯನ್ನು ನಂದಿಸಲು ಒಎನ್ಜಿಸಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಧಿಕಾರಿಗಳು ಪ್ರದೇಶವನ್ನು ಸುತ್ತುವರಿದು ನಿಗಾ ವಹಿಸಿದರು. ಅನಂತರ ಸಾರ್ವಜನಿಕ ಸುರಕ್ಷೆಗಾಗಿ ತುರ್ತು ಕ್ರಮಗಳನ್ನು ತೆಗೆದುಕೊಂಡರು.
ಹಿರಿಯ ಜಿಲ್ಲಾ ಅಧಿಕಾರಿಗಳು ಹಾಗೂ ಒಎನ್ಜಿಸಿ ಅಧಿಕಾರಿಗಳು ಸ್ಥಳದಲ್ಲಿದ್ದು, ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.







