ಆಂಧ್ರಪ್ರದೇಶ: ಶೈಕ್ಷಣಿಕ ಭವಿಷ್ಯದ ಬಗ್ಗೆ ಕಳವಳದಿಂದ ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ | PC : freepik.com
ಕಾಕಿನಾಡ: ಇಂದಿನ ಸ್ಪರ್ಧಾತ್ಮಕ ಜಗತ್ತಿನ ಒತ್ತಡವನ್ನು ಸಹಿಸುವುದು ತನ್ನ ಮಕ್ಕಳಿಗೆ ಸಾಧ್ಯವಾಗುವುದಿಲ್ಲ ಎಂದು ಕಳವಳಗೊಂಡಿದ್ದ ವ್ಯಕ್ತಿ ಅವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಶುಕ್ರವಾರ ಆಂಧ್ರಪ್ರದೇಶ ಕಾಕಿನಾಡದ ಸುಬ್ಬರಾವ್ ನಗರದಲ್ಲಿ ನಡೆದಿದೆ.
ಪೋಲಿಸ್ ವರದಿಗಳ ಪ್ರಕಾರ ಮೂಲತಃ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡಪಲ್ಲಿಗುಡೆಂ ನಿವಾಸಿ ವನಪಲ್ಲಿ ಚಂದ್ರಕಿಶೋರ್ ಅವರು ಕಾಕಿನಾಡದ ವಕಾಲಪುಡಿಯಲ್ಲಿನ ಒಎನ್ಜಿಸಿ ಕಚೇರಿಯಲ್ಲಿ ಸಹಾಯಕ ಅಕೌಂಟಂಟ್ ಆಗಿ ಕೆಲಸ ಮಾಡುತ್ತಿದ್ದರು. ಪತ್ನಿ ತನುಜಾ ಮತ್ತು ಇಬ್ಬರು ಪುತ್ರರಾದ ಒಂದನೇ ತರಗತಿಯ ವಿದ್ಯಾರ್ಥಿ ಜೋಷಿಲ್(7) ಮತ್ತು ಅಪ್ಪರ್ ಕೆಜಿಯಲ್ಲಿ ಓದುತ್ತಿದ್ದ ನಿಖಿಲ್(6) ಜೊತೆ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು. ತನ್ನ ಮಕ್ಕಳ ಶೈಕ್ಷಣಿಕ ಸಾಧನೆಯ ಬಗ್ಗೆ ಕಳವಳಗೊಂಡಿದ್ದ ಚಂದ್ರಕಿಶೋರ್ ಇತ್ತೀಚಿಗೆ ಅವರ ಶಾಲೆಯನ್ನು ಬದಲಿಸಿದ್ದರು.
ಶುಕ್ರವಾರ ಚಂದ್ರಕಿಶೋರ್ ತನ್ನ ಕುಟುಂಬದೊಂದಿಗೆ ಕಚೇರಿಯಲ್ಲಿ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಮಕ್ಕಳ ಶಾಲಾ ಸಮವಸ್ತ್ರಗಳಿಗಾಗಿ ಅಳತೆ ಕೊಡಿಸಲು ಅವರನ್ನು ಟೈಲರ್ ಬಳಿ ಕರೆದೊಯ್ದು 10 ನಿಮಿಷಗಳಲ್ಲಿ ವಾಪಸ್ ಬರುತ್ತೇನೆ ಎಂದು ಪತ್ನಿಗೆ ತಿಳಿಸಿದ್ದ ಅವರು, ಆಕೆಯನ್ನು ಅಲ್ಲಿಯೇ ಇರುವಂತೆ ಸೂಚಿಸಿದ್ದರು. ಆದರೆ ಬಹಳ ಹೊತ್ತಾದರೂ ಅವರು ಮರಳದಿದ್ದಾಗ ಶಂಕೆಗೊಂಡ ತನುಜಾ ಪತಿಗೆ ಕರೆ ಮಾಡಿದ್ದರು. ಆದರೆ ಅದಕ್ಕೆ ಉತ್ತರಿಸದಿದ್ದಾಗ ಕೆಲವು ಸಹೋದ್ಯೋಗಿಗಳೊಂದಿಗೆ ತಮ್ಮ ಅಪಾರ್ಟ್ಮೆಂಟ್ಗೆ ಧಾವಿಸಿದ್ದರು.
ಅಪಾರ್ಟ್ಮೆಂಟ್ನ ಬಾಗಿಲನ್ನು ಲಾಕ್ ಮಾಡಲಾಗಿದ್ದು,ಕಿ ಟಕಿಯಿಂದ ಇಣುಕಿದಾಗ ಸೀಲಿಂಗ್ ಫ್ಯಾನ್ನಿಂದ ನೇತಾಡುತ್ತಿದ್ದ ಚಂದ್ರಕಿಶೋರ್ ಮೃತದೇಹ ಕಂಡುಬಂದಿತ್ತು. ಎಲ್ಲ ಸೇರಿ ಬಾಗಿಲನ್ನು ಒಡೆದು ಒಳಪ್ರವೇಶಿಸಿದಾಗ ಮಕ್ಕಳಿಬ್ಬರ ಕೈಕಾಲುಗಳನ್ನು ಕಟ್ಟಿ ತಲೆಗಳನ್ನು ನೀರು ತುಂಬಿದ ಬಕೆಟ್ಗಳಲ್ಲಿ ಮುಳುಗಿಸಲಾಗಿತ್ತು. ಆ ಭಯಾನಕ ದೃಶ್ಯವನ್ನು ಕಂಡು ಆಘಾತಗೊಂಡ ತನುಜಾ ಕುಸಿದು ಬಿದ್ದಿದ್ದರು.
ಚಂದ್ರಕಿಶೋರ್ ಬರೆದಿಟ್ಟಿದ್ದ ಆತ್ಮಹತ್ಯಾ ಪತ್ರವನ್ನು ಪೋಲಿಸರು ಪತ್ತೆ ಮಾಡಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನ ಒತ್ತಡಗಳನ್ನು ಎದುರಿಸಲು ತನ್ನ ಮಕ್ಕಳಿಗೆ ಸಾಧ್ಯವಿಲ್ಲ ಮತ್ತು ಅವರಿಗೆ ಭವಿಷ್ಯವಿಲ್ಲ ಎಂದು ತಾನು ನಂಬಿದ್ದೇನೆ ಎಂದು ಚಂದ್ರಕಿಶೋರ್ ಪತ್ರದಲ್ಲಿ ಬರೆದಿದ್ದಾರೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







