ಆಂಧ್ರಪ್ರದೇಶ: ಮೂವರು ಮಾವೋವಾದಿಗಳ ಹತ್ಯೆ

ಸಾಂದರ್ಭಿಕ ಚಿತ್ರ
ರಾಮ್ಪಚೋದವರಂ (ಆಂಧ್ರಪ್ರದೇಶ): ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮಾವೋವಾದಿಗಳು ಹತ್ಯೆಗೀಡಾಗಿರುವ ಘಟನೆ ಬುಧವಾರ ಬೆಳಗ್ಗೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿನ ಮಾವೋವಾದಿ ನಿಗ್ರಹ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಗುಪ್ತಚರ ದಳಗಳ ಪೂರ್ವ ಮಾಹಿತಿಯನ್ನು ಆಧರಿಸಿ ಈ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಈ ಘಟನೆಯಲ್ಲಿ ಮೃತಪಟ್ಟಿರುವ ಮಾವೋವಾದಿಗಳ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬಾರ್ದರ್, "ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂವರು ಮಾವೋವಾದಿಗಳು ಹತರಾಗಿದ್ದಾರೆ" ಎಂದು ಹೇಳಿದ್ದಾರೆ.
ಈ ನಡುವೆ, ಮಾವೋವಾದಿಗಳ ಮೃತದೇಹಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ ಎಂದು ರಾಮ್ಪಚೋದವರಂ ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
ಈ ಸಂಬಂಧ, ತನಿಖೆ ಮತ್ತಷ್ಟು ಪ್ರಗತಿಯಲ್ಲಿದ್ದು, ಈ ಪ್ರದೇಶದಲ್ಲಿ ಅಡಗಿರುವ ಉಳಿದ ಮಾವೋವಾದಿಗಳ ಉಪಸ್ಥಿತಿಯನ್ನು ಪತ್ತೆ ಹಚ್ಚಲು ಈ ಭಾಗದ ಬುಡಕಟ್ಟು ಪ್ರಾಂತ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.







