ಆಂಧ್ರಪ್ರದೇಶ | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಸ್ತ್ರೀ ಶಕ್ತಿ’ ಯೋಜನೆಗೆ ಚಾಲನೆ

PC : freepressjournal.in
ಅಮರಾವರಿ,ಆ.15: ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಒದಗಿಸುವ ‘ಸ್ತ್ರೀ ಶಕ್ತಿ’ ಯೋಜನೆಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಎನ್ಡಿಎ ನಾಯಕರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು.
ಯೋಜನೆಯಡಿ ಆಂಧ್ರಪ್ರದೇಶದ ನಿವಾಸಿ ಸ್ಥಾನಮಾನ ಹೊಂದಿರುವ ಎಲ್ಲ ಬಾಲಕಿಯರು,ಮಹಿಳೆಯರು ಮತ್ತು ತೃತೀಯ ಲಿಂಗಿಗಳು ರಾಜ್ಯದೊಳಗೆ ಎಲ್ಲಿ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು.
ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ಮತ್ತು ಐಟಿ ಸಚಿವ ನಾರಾ ಲೋಕೇಶ್ ಅವರು ಮಹಿಳೆಯರೊಂದಿಗೆ ಬಸ್ಸೊಂದರಲ್ಲಿ ಪ್ರಯಾಣವನ್ನೂ ಮಾಡಿದರು.
ಯೋಜನೆಯು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ(ಎಪಿಎಸ್ಆರ್ಟಿಸಿ)ದ ಪಲ್ಲೆವೆಲುಗು, ಅಲ್ಟ್ರಾ ಪಲ್ಲೆವೆಲುಗು, ಸಿಟಿ ಆರ್ಡಿನರಿ, ಮೆಟ್ರೋ ಎಕ್ಸ್ಪ್ರೆಸ್ ಮತ್ತು ಎಕ್ಸ್ಪ್ರೆಸ್ ಬಸ್ ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರ ಪ್ರಯಾಣಕ್ಕೆ ಅವಕಾಶ ಒದಗಿಸುತ್ತದೆ.
ರಾಜ್ಯದಲ್ಲಿಯ ಸುಮಾರು 2.62 ಕೋ.ಮಹಿಳೆಯರು ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವು 2024ರ ಚುನಾವಣೆ ಸಂದರ್ಭದಲ್ಲಿ ನಾಯ್ಡು ನೀಡಿದ್ದ ‘ಸೂಪರ್ ಸಿಕ್ಸ್’ಭರವಸೆಗಳಲ್ಲಿ ಒಂದಾಗಿದೆ.
19ರಿಂದ 59 ವರ್ಷ ವಯೋಮಾನದ ಪ್ರತಿ ಮಹಿಳೆಗೆ ಮಾಸಿಕ 1,500 ರೂ.ನೆರವು,ಯುವಜನರಿಗೆ 20 ಲಕ್ಷ ಉದ್ಯೋಗಗಳು ಅಥವಾ ಮಾಸಿಕ 3,000 ರೂ.ಗಳ ನಿರುದ್ಯೋಗ ಭತ್ಯೆ, ಶಾಲೆಗೆ ಹೋಗುವ ಪ್ರತಿ ಮಗುವಿಗೆ ವಾರ್ಷಿಕ 15,000 ರೂ.,ಪ್ರತಿ ಮನೆಗೆ ವಾರ್ಷಿಕ ಮೂರು ಉಚಿತ ಗ್ಯಾಸ್ ಸಿಲಿಂಡರ್ ಗಳು ಮತ್ತು ಪ್ರತಿ ರೈತರಿಗೆ ವಾರ್ಷಿಕ 20,000 ರೂ.ಗಳ ಆರ್ಥಿಕ ನೆರವು ಇವೂ ಈ ಭರವಸೆಗಳಲ್ಲಿ ಸೇರಿವೆ.







