ಆಂಧ್ರಪ್ರದೇಶ| ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆ

ಸಾಂದರ್ಭಿಕ ಚಿತ್ರ
ಕೋಲ್ಕತಾ, ಜ. 22: ಕಳ್ಳತನದ ಆರೋಪ ಹೊರಿಸಿ ಪಶ್ಚಿಮಬಂಗಾಳದ ವಲಸೆ ಕಾರ್ಮಿಕನೋರ್ವನನ್ನು ಜನರ ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ ಕೊಮರಾಲುವಿನಿಲ್ಲಿ ಬುಧವಾರ ನಡೆದಿದೆ.
ಹತ್ಯೆಯಾದ ವಲಸೆ ಕಾರ್ಮಿಕನನ್ನು ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮಗರಹಾಟ್ ಪಶ್ಚಿಮ ಪ್ರದೇಶದ ರಂಗಿಲಬಾದ್ ಗ್ರಾಮದ ನಿವಾಸಿ ಮಂಜುರ್ ಆಲಂ ಲಸ್ಕರ್ ಎಂದು ಗುರುತಿಸಲಾಗಿದೆ. ಈತ ಕೊಮರಾಲುವಿನ ಜರಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ.
ಮಂಜುರ್ ಕಳವುಗೈದಿದ್ದಾನೆ ಎಂದು ಆರೋಪಿಸಿ ಕ್ರಿಮಿನಲ್ಗಳ ಗುಂಪೊಂದು ಆತನನ್ನು ಥಳಿಸಿ ಹತ್ಯೆಗೈದಿದೆ ಎಂದು ಆತನ ಕುಟುಂಬ ಆರೋಪಿಸಿದೆ.
ಮಂಗಳವಾರ ಅಪರಿಚಿತ ಸಂಖ್ಯೆಯಿಂದ ಸುಲಿಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ 25 ಸಾವಿರ ರೂ. ಬೇಡಿಕೆ ಇರಿಸಿದ್ದ. ಹಣ ನೀಡದೇ ಇದ್ದರೆ, ಮಂಜುರ್ ಆಲಂ ಲಷ್ಕರ್ನನ್ನು ಹತ್ಯೆಗೈಯಲಾಗುವುದು ಎಂದು ಬೆದರಿಕೆ ಒಡ್ಡಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.
ಕುಟುಂಬದವರು ಆನ್ಲೈನ್ ಪಾವತಿ ಮೂಲಕ 6,000 ರೂ. ವರ್ಗಾಯಿಸಿದ್ದಾರೆ. ಮರುದಿನ ಮಂಜುರ್ ಮೃತಪಟ್ಟಿದ್ದಾನೆ ಎಂದು ಅಪರಿಚಿತರು ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಮಗರಹಾಟ್ನ ಸ್ಥಳೀಯ ಟಿಎಂಸಿ ಘಟಕ, ಮಂಜುರ್ ಹತ್ಯೆಯಲ್ಲಿ ಕೊಮರಾಲುವಿನ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ.
ಬಾಂಗ್ಲಾದೇಶದ ಪ್ರಜೆ ಎಂಬ ಶಂಕೆಯಲ್ಲಿ ಪಶ್ಚಿಮಬಂಗಾಳದ ಮುರ್ಷಿದಾಬಾದ್ನ ಬೆಲಡಾಂಗಾದ ವಲಸೆ ಕಾರ್ಮಿಕ ಅಲಾವುದ್ದೀನ್ ಶೇಖ್ನನ್ನು ಜಾರ್ಖಂಡ್ನಲ್ಲಿ ಹತ್ಯೆಗೈದ ಕೆಲವೇ ದಿನಗಳ ಬಳಿಕ ಈ ಹತ್ಯೆ ನಡೆದಿದೆ.







