ಆಂಧ್ರಪ್ರದೇಶ | ಬುಡಕಟ್ಟು ಬಾಲಕಿಯ ಸಾಮೂಹಿಕ ಅತ್ಯಾಚಾರ

ಪಾಲವಂಚ, ಆ. 25: ಆಂಧ್ರಪ್ರದೇಶದ ಅಲ್ಲುರಿ ಸೀತಾರಾಮರಾಜು ಜಿಲ್ಲೆಯ 17 ವರ್ಷದ ಬುಡಕಟ್ಟು ಬಾಲಕಿಗೆ ಇಬ್ಬರು ವ್ಯಕ್ತಿಗಳು ಮತ್ತು ಬರುವ ಔಷಧ ಬೆರೆಸಿದ ತಂಪು ಪಾನೀಯ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶ-ಚತ್ತೀಸ್‌ಗಢ ಗಡಿಯ ಅರಣ್ಯದ ಸಮೀಪ ನಡೆದಿದೆ.
ಅತ್ಯಾಚಾರ ಎಸಗಿದ ಬಳಿಕ ಆರೋಪಿಗಳು ಬಾಲಕಿಯನ್ನು ತಮ್ಮೊಂದಿಗೆ ಕರೆದುಕೊಂಡು ಬಂದು ತೆಲಂಗಾಣದ ಭದ್ರಾದ್ರಿ ಕೊಥಗುಡೇಂ ಜಿಲ್ಲೆಯ ಪಲವಂಚ ಮಂಡಲದ ವ್ಯಾಪ್ತಿಯ ಜಗನ್ನಾಥಪುರಂನಲ್ಲಿರುವ ಪೆದ್ದಮ್ಮ ಥಲ್ಲಿ ದೇವಾಲಯದಲ್ಲಿ ತ್ಯಜಿಸಿ ಹೋಗಿದ್ದಾರೆ.
ಈ ಘಟನೆ ಆಗಸ್ಟ್ 22ರಂದು ನಡೆದಿದ್ದು, ರವಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಬೆಳಕಿಗೆ ಬಂದಿದೆ.
ಚೈಲ್ಡ್ ಲೈನ್ ಅಧಿಕಾರಿಗಳೊಂದಿಗೆ ಮಾತನಾಡುತ್ತಾ ಸಂತ್ರಸ್ತ ಬಾಲಕಿ, ತಾನು ವಾರಗಳ ಹಿಂದೆ ಚತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿರುವ ಅತ್ತೆಯ ಮನೆಗೆ ಹೋಗಿದ್ದೆ. ಮನೆಗೆ ಹಿಂದಿರುಗಲು ಶುಕ್ರವಾರ ಕುಂಟಾ ಬಸ್ ನಿಲ್ದಾಣಕ್ಕೆ ಬಂದಾಗ, ಬಸ್ ತಪ್ಪಿರುವುದು ಅರಿವಿಗೆ ಬಂತು. ತನಗೆ ಯಾವುದೇ ಆಯ್ಕೆ ಇರಲಿಲ್ಲ. ಆಗ ರಿಕ್ಷಾ ಚಾಲಕನೋರ್ವ ತನ್ನನ್ನು ಮನೆಗೆ ಕರೆದೊಯ್ಯುವುದಾಗಿ ತಿಳಿಸಿದ. ಆ ರಿಕ್ಷಾದಲ್ಲಿ ಇನ್ನೋರ್ವ ಕೂಡ ಇದ್ದ. ತಾನು ರಿಕ್ಷಾ ಹತ್ತಿದೆ. ಅವರು ತನ್ನನ್ನು ಆಂಧ್ರಪ್ರದೇಶದ ಚಿಂಟೂರು ಮಂಡಲ್‌ನ ಛಟ್ಟಿ ಹಾಗೂ ಎಡುಗುರುಲಪಲ್ಲಿಯ ನಡುವಿನ ಅರಣ್ಯ ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ಮತ್ತು ಬರುವ ಔಷಧ ಬೆರೆಸಿದ ತಂಪು ಪಾನೀಯ ನೀಡಿದರು. ತಾನು ಪ್ರಜ್ಞೆ ಕಳೆದುಕೊಂಡೆ. ಅವರಿಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದರು. ಅನಂತರ ನಿನ್ನೆ ರಾತ್ರಿ ಪೆದ್ದಮ್ಮ ಥಲ್ಲಿ ದೇವಾಲಯದಲ್ಲಿ ತ್ಯಜಿಸಿ ಹೋದರು’’ ಎಂದು ಹೇಳಿದ್ದಾಳೆ.
ಮರು ದಿನ ಬೆಳಗ್ಗೆ ಕೆಲವು ಸ್ಥಳೀಯರು ಬಾಲಕಿಯೋರ್ವಳು ಪ್ರಜ್ಞೆ ಕಳೆದುಕೊಂಡು ಬಿದ್ದಿರುವುದನ್ನು ಗಮನಿಸಿದರು. ಆಕೆಯನ್ನು ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಬಾಲಕಿಯ ಪರಿಸ್ಥಿತಿ ಹಾಗೂ ಆಕೆಯ ದೇಹದ ಮೇಲಿನ ಗಾಯದ ಗುರುತನ್ನು ಗಮನಿಸಿ ಅಲ್ಲಿನ ವೈದ್ಯರು ಚೈಲ್ಡ್ ಲೈನ್ ಗೆ ಮಾಹಿತಿ ನೀಡಿದರು. ವೈದ್ಯಕೀಯ ನೆರವು ನೀಡಲು ಬಾಲಕಿಯನ್ನು ರಾಜ್ಯ ಸರಕಾರ ನಡೆಸುತ್ತಿರುವ ಕೊಥೆಗುಡೇಮ್‌ನಲ್ಲಿರುವ ಶಕ್ತಿ ಸದನ ಆಶ್ರಯ ತಾಣದಲ್ಲಿ ದಾಖಲಿಸಲಾಗಿದೆ.
ಈ ಬಗ್ಗೆ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ಐಸಿಡಿಎಸ್)ಯ ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ (ಸಿಡಿಪಿಒ) ಪ್ರಸನ್ನ ಕುಮಾರಿ ದೂರು ನೀಡಿದ್ದಾರೆ. ಅನಂತರ ಈ ದೂರಿನ ಆಧಾರದಲ್ಲಿ ಪಲವಂಚ ಪಟ್ಟಣ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಲಾಯಿತು. ಅಪರಾಧ ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಚಿಂತೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.
‘‘ಸಂತ್ರಸ್ತ ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಗುರುತಿಸಲು ಹಾಗೂ ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ. ಅಪರಾಧ ನಡೆದ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಕೂಲಂಕಷ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಬಂಧಿಶಲಾಗುವುದು’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







