ಕ್ರಿಕೆಟ್ ಆಟದ ನಾಯಕತ್ವ ನೀಡದ ಸಿಟ್ಟಿಗೆ ಕಚೇರಿಗೆ ನುಗ್ಗಿ ರಂಪಾಟ

PC: TOI
ಲಕ್ನೋ: ಇಲಾಖಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ನಾಯಕತ್ವ ನೀಡಿಲ್ಲ ಎಂಬ ಕಾರಣಕ್ಕೆ ಜಂಟಿ ಆಯುಕ್ತರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಉಪ ಆಯುಕ್ತ ಶ್ರೇಣಿಯ ಐಆರ್ಎಸ್ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಲಕ್ನೋದ ಹಝ್ರತ್ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ್ದಲ್ಲದೇ ಉಸಿರುಗಟ್ಟಿಸಿ ಸಾಯಿಸುವ ಪ್ರಯತ್ನ ನಡೆದಿದೆ ಎಂದು ಆಪಾದಿಸಲಾಗಿದೆ.
ಹಝ್ರತ್ ಗಂಜ್ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ 2016ನೇ ಬ್ಯಾಚ್ ಐಆರ್ ಎಸ್ ಅಧಿಕಾರಿ ಗೌರವ್ ಗರ್ಗ್ ಅವರು, ಪ್ರಸ್ತುತ ಉತ್ತರಾಖಂಡದ ಕಾಶಿಪುರದಲ್ಲಿರುವ ತಮ್ಮ ಹಿರಿಯ ಸಹೋದ್ಯೋಗಿ ಯೋಗೇಂದ್ರ ಕುಮಾರ್ ಮಿಶ್ರಾ ಮೇಲೆ ದೂರು ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಇರುವ ಸಂದರ್ಭದಲ್ಲೇ ಗುರುವಾರ ಕಚೇರಿಗೆ ನುಗ್ಗಿ ನಿರಂತರ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.
ಫೆಬ್ರವರಿ 13ರಂದು ಲಕ್ನೋದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಇಲಾಖಾ ಮಟ್ಟದ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಹೆಸರಿಸುವಂತೆ ಮಿಶ್ರಾ ಒತ್ತಾಯಿಸಿದ್ದರು. ಆದರೆ ಅದಕ್ಕೆ ನಿರಾಕರಿಸಿದಾಗ ಪಿಚ್ ಹಾಳುಗೆಡವಿ ಪಂದ್ಯಕ್ಕೆ ಅಡ್ಡಿಪಡಿಸುವ ಬೆದರಿಕೆಯನ್ನು ಮಿಶ್ರಾ ಹಾಕಿದ್ದರು. ತಂಡದ ಇತರ ಸದಸ್ಯರಿಗೆ ವಾಟ್ಸಪ್ ಸಂದೇಶ ಕಳುಹಿಸಿ, "ನಿಮ್ಮ ಸಹೋದರಿಯ ಪ್ರೇಮಸಂಬಂಧದ ಬಗ್ಗೆ ನನಗೆ ತಿಳಿದಿದೆ" "ಜಾಗೃತರಾಗಿರಿ" ಎಂಬ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿಸುವ ಬೆದರಿಕೆಯನ್ನೂ ಹಾಕಿದ್ದರು. ಇಂಥ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಉತ್ತರಾಖಂಡಕ್ಕೆ ವರ್ಗಾಯಿಸಲಾಗಿತ್ತು. ಆದರೆ 29ರಂದು ಏಕಾಏಕಿ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿ, ವರ್ಗಾವಣೆ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿದರು. ಗಾಜಿನ ಲೋಟದಿಂದ ನೀರು ಚೆಲ್ಲಿ ಮುರಿದ ಲೋಟದಿಂದ ಇರಿಯುವ ಪ್ರಯತ್ನವನ್ನೂ ಮಾಡಿದ್ದಾರೆ. ಗರ್ಗ್ ತಪ್ಪಿಸಿಕೊಳ್ಳಲು ಮುಂದಾದಾಗ ಅವರನ್ನು ಹಿಡಿದುಕೊಂಡು ಕತ್ತು ಹಿಸುಕುವ ಪ್ರಯತ್ನ ಮಾಡಿದ್ದಾಗಿ ಆಪಾದಿಸಲಾಗಿದೆ. ಪದೇ ಪದೇ ಗುದ್ದು ನೀಡಿದ್ದರಿಂದ ಮೂಗು, ತುಟಿ ಹಾಗೂ ಕಿವಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.







