ದೇವರ ಮೇಲಿನ ಸಿಟ್ಟಿನಿಂದ ಹುಂಡಿ ಕದಿಯುತ್ತಿದ್ದ ಎಚ್ಐವಿ ಸೋಂಕಿತ!

timesofindia
ರಾಯಪುರ: ಎಚ್ಐವಿ ಸೋಂಕಿತ ವ್ಯಕ್ತಿಯೊರ್ವ ದೇವರ ಕೃತ್ಯದಿಂದ ತನಗೆ ಸೋಂಕು ತಗುಲಿದೆ ಎಂಬ ಸಿಟ್ಟಿನಿಂದ ಪ್ರತೀಕಾರವಾಗಿ ದಶಕಗಳ ಕಾಲ ದೇವಾಲಯಗಳ ಹುಂಡಿಯಿಂದ ಹಣ ಕಳ್ಳತನ ಮಾಡುತ್ತಿದ್ದ ಪ್ರಕರಣ ಛತ್ತೀಸ್ಗಢದ ದುರ್ಗ್ನಲ್ಲಿ ಬೆಳಕಿಗೆ ಬಂದಿದೆ.
ತನಗೆ ಎಚ್ಐವಿ ಸೋಂಕು ತಗುಲಲು ಕಾರಣವಾದ ದೇವರಿಗೆ ಪ್ರತಿಯಾಗಿ ತಕ್ಕ ಶಾಸ್ತಿ ಮಾಡಬೇಕು ಎಂದು ಕಳ್ಳತನದ ದಂಧೆ ಆರಂಭಿಸಿದ ಎಂದು ಪೊಲೀಸರು ಹೇಳಿದ್ದಾರೆ. 2012ರಲ್ಲಿ ಹಲ್ಲೆ ಪ್ರಕರಣವೊಂದರ ಸಂಬಂಧ ಬಂಧಿತನಾಗಿ ಜೈಲಿನಲ್ಲಿದ್ದ ಅವಧಿಯಲ್ಲಿ ಈತನಿಗೆ ಎಚ್ಐವಿ ಸೋಂಕು ತಗುಲಿತ್ತು.
45 ವರ್ಷದ ಈತನನ್ನು ಗುರುವಾರ ಬಂಧಿಸಲಾಗಿದ್ದು, ದುರ್ಗ್ ಪಟ್ಟಣದಲ್ಲಿ ಮತ್ತು ಹೊರವಲಯದಲ್ಲಿ ಕನಿಷ್ಠ 10 ದೇವಾಲಯಗಳಲ್ಲಿ ಕಳವು ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಈತ ಇನ್ನೂ ಹಲವು ಪ್ರಕರಣಲ್ಲಿ ಶಾಮೀಲಾಗಿರುವ ಶಂಕೆ ಇದೆ. ಇದರ ದೃಢೀಕರಣಕ್ಕಾಗಿ ಲಭ್ಯವಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕಲೆಹಾಕುತ್ತಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಆ. 23 ಮತ್ತು 24ರ ನಡುವಿನ ರಾತ್ರಿ ದುರ್ಗ್ ಪಟ್ಟಣದ ಹೊರವಲಯದಲ್ಲಿರುವ ಜೈನಮಂದಿರದ ಬೀಗ ಮುರಿದ ಪ್ರಕರಣದಲ್ಲಿ ಆರೋಪಿ ಸಿಕ್ಕಿಹಾಕಿಕೊಂಡಿದ್ದಾನೆ. ಆ ಬಳಿಕ ಆತನನ್ನು ವಿಚಾರಣೆಗೆ ಗುರಿಪಡಿಸಿ, ಅಧಿಕೃತವಾಗಿ ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಎಚ್ಐವಿ ಸೋಂಕು ತಗುಲಿದ ಬಳಿಕ ದೇವರ ಮೇಲಿನ ನಂಬಿಕೆ ಕಳೆದುಕೊಂಡ. ದೇವರ ಮೇಲಿನ ಸಿಟ್ಟು ತೋರಿಸುವ ಸಲುವಾಗಿ ಕೇವಲ ದೇವಾಲಯಗಳನ್ನು ಗುರಿ ಮಾಡಿ ಕಳ್ಳತನ ಮಾಡುತ್ತಿದ್ದ ಎಂದು ಎಸ್ಪಿ ವಿಜಯ್ ಅಗರ್ವಾಲ್ ಹೇಳಿದ್ದಾರೆ.
ಮಾನಸಿಕ ಅಸ್ವಸ್ಥತೆಯ ಸೂಚನೆ ಕಂಡುಬಂದಿದ್ದು, ಹಲವು ವರ್ಷಗಳಿಂದ ನಿರುದ್ಯೋಗಿಯಾಗಿ ಜೀವನೋಪಾಯಕ್ಕಾಗಿ ಕಳ್ಳತನವನ್ನೇ ಅವಲಂಬಿಸಿದ್ದ ಎಂದು ವಿವರಿಸಿದ್ದಾರೆ.







