ಅನಿಲ್ ಅಂಬಾನಿ ನಂಟು ಹೊಂದಿದ ಕಂಪೆನಿಗಳ ಮೇಲೆ 3ನೇ ದಿನವೂ ಮುಂದುವರಿದ ಈಡಿ ದಾಳಿ

ಅನಿಲ್ ಅಂಬಾನಿ | PTI
ಹೊಸದಿಲ್ಲಿ, ಜು. 26: ರಿಲಾಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಸಂಬಂಧಿಸಿದ ಕಂಪೆನಿಗಳನ್ನು ಗುರಿಯಾಗಿರಿಸಿದ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ದಾಳಿ ಮುಂಬೈಯಲ್ಲಿ ಸತತ ಮೂರನೇ ದಿನವಾದ ಶನಿವಾರ ಕೂಡ ಮುಂದುವರಿದಿದೆ.
ಸಂದೇಹಾಸ್ಪದ 3,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಹಾಗೂ ಇತರ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿ ಹಲವು ಸ್ಥಳಗಳಲ್ಲಿ ದಾಖಲೆಗಳು ಹಾಗೂ ಕಂಪ್ಯೂಟರ್ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಜುಲೈ 24ರಿಂದ 35ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವು ತಿಳಿಸಿವೆ.
ಅನಿಲ್ ಅಂಬಾನಿ ಸಮೂಹದ ಕಂಪೆನಿಗಳ ಹಿರಿಯ ಅಧಿಕಾರಿಗಳು ಸೇರಿದಂತೆ 50 ಕಂಪೆನಿಗಳು ಹಾಗೂ 25 ಮಂದಿಯನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗುತ್ತಿದೆ. 2017 ಹಾಗೂ 2019ರ ನಡುವೆ ಅಂಬಾನಿ ನಂಟು ಹೊಂದಿದ ಕಂಪೆನಿಗಳಿಗೆ ಯೆಸ್ ಬ್ಯಾಂಕ್ ನೀಡಿದ 3,000 ಕೋಟಿ ರೂ. ಸಾಲವನ್ನು ವರ್ಗಾವಣೆ ಮಾಡಿದ ಆರೋಪದ ಕುರಿತು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ರಿಲಾಯನ್ಸ್ ಪವರ್ ಹಾಗೂ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಜುಲೈ 24ರಂದು ಹೇಳಿಕೆ ನೀಡಿದ್ದು, ಈ ದಾಳಿಗಳು ತಮ್ಮ ವ್ಯವಹಾರ ಹಾಗೂ ಪಾಲುದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದೆ.
ರಿಲಾಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್ (ಆರ್ಸಿಒಎಂ) ಅಥವಾ ರಿಲಾಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್ಎಚ್ಎಫ್ಎಲ್)ನ ಹಣ ವರ್ಗಾವಣೆ ಕುರಿತ ಆರೋಪಕ್ಕೆ ಸಂಬಂಧಿಸಿ ಮಾಧ್ಯಮ ವರದಿಗಳು 10 ವರ್ಷಕ್ಕೂ ಹಿಂದಿನದು ಎಂದು ಅದು ತಿಳಿಸಿದೆ.







