ಈಶಾನ್ಯ ರಾಜ್ಯದ ಜನರ ಮೇಲಿನ ದೌರ್ಜನ್ಯ; ಮತ್ತೆ ಕೇಳಿಸಿದೆ Anti-racial law ಜಾರಿಗೆ ಒತ್ತಾಯದ ಕೂಗು

Photo Credit : thenewsminute.com
ತ್ರಿಪುರಾದ ಏಂಜಲ್ ಚಕ್ಮಾ ಎಂಬ ವಿದ್ಯಾರ್ಥಿಯನ್ನು ಉತ್ತರಾಖಂಡದ ಡೆಹ್ರಾಡೂನ್ ನಗರದಲ್ಲಿ ಐವರು ಯುವಕರು ಇರಿದು ಕೊಂದಿದ್ದರು. ಉತ್ತರಾಖಂಡದಲ್ಲಿ ನಡೆದ ಜನಾಂಗೀಯ ದ್ವೇಷ ಪ್ರಕರಣವು ಈಶಾನ್ಯ ಭಾರತದ ಅನೇಕರಿಗೆ 2014ರಲ್ಲಿ ದಿಲ್ಲಿಯಲ್ಲಿ ಅರುಣಾಚಲ ಪ್ರದೇಶದ ವಿದ್ಯಾರ್ಥಿ ನಿಡೋ ತಾನಿಯಮ್ ಹತ್ಯೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಈಶಾನ್ಯ ಜನರ ಮೇಲೆ ನಡೆಯುವ ಜನಾಂಗೀಯ ತಾರತಮ್ಯದ ಸುದ್ದಿ ಇದು ಹೊಸದೇನಲ್ಲ.
ಅವರು ನಮ್ಮಂತಿಲ್ಲ, ಅವರ ಚರ್ಮ, ಮೂಗು, ಕಣ್ಣು, ದೇಹರಚನೆ ನೋಡಿ ಗೇಲಿ ಮಾಡುವುದು ಭಾರತದ ಇತರ ಪ್ರದೇಶಗಳಲ್ಲಿ ‘ಸಾಮಾನ್ಯ’ವೆಂಬಂತಾಗಿದೆ. ಭಾರತದಲ್ಲಿ ಜನಾಂಗೀಯವಾಗಿ ವ್ಯಾಖ್ಯಾನಿಸಲಾದ ಸ್ಟೀರಿಯೊಟೈಪ್ಗಳು ಎಲ್ಲೆಡೆಯೂ ಇವೆ. ಬೆಳ್ಳಗಿನ ಚರ್ಮದ ಬಗ್ಗೆ ಮೆಚ್ಚುಗೆ, ಕಪ್ಪು ಚರ್ಮದ ಬಗ್ಗೆ ತಾತ್ಸಾರ, ಲೇವಡಿ ಒಂದೆಡೆಯಾದರೆ, ಈಶಾನ್ಯ ಭಾರತದ ಜನರ ದೇಹಾಕೃತಿಗಳನ್ನು ನೋಡಿ 'ಬಾಡಿ ಶೇಮಿಂಗ್' ಮಾಡುವುದು ಹಿಂದಿನಿಂದಲೂ ನಡೆದು ಬರುತ್ತಿದೆ.
*ಯಾರು ಈ ಏಂಜಲ್ ಚಕ್ಮಾ?
ಡೆಹ್ರಾಡೂನ್ನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಏಂಜಲ್ ಚಕ್ಮಾ (24) ಎಂಬ ಯುವಕನ ಮೇಲೆ ಡಿಸೆಂಬರ್ 9ರಂದು ದಾಳಿ ನಡೆದಿತ್ತು. ಚಕ್ಮಾ ಮತ್ತು ಆತನ ಸಹೋದರ ಸೆಲಾಕುಯಿ ಪ್ರದೇಶದಲ್ಲಿ ದಿನಸಿ ಖರೀದಿಸುತ್ತಿದ್ದಾಗ, ಕುಡಿದ ಮತ್ತಿನಲ್ಲಿದ್ದ ಪುರುಷರ ಗುಂಪೊಂದು ಅವರನ್ನು ಜನಾಂಗೀಯ ನಿಂದನೆ ಮಾಡಿದೆ. ಚಕ್ಮಾ ಈ ಹೇಳಿಕೆಗಳನ್ನು ಆಕ್ಷೇಪಿಸಿದಾಗ, ಆ ಗುಂಪು ರಾಡ್ ಮತ್ತು ಚಾಕುಗಳಿಂದ ಹಲ್ಲೆ ನಡೆಸಿದೆ ಎಂದು FIR ನಲ್ಲಿ ಉಲ್ಲೇಖಿಸಲಾಗಿದೆ. ಡೆಹ್ರಾಡೂನ್ನ ಆಸ್ಪತ್ರೆಯಲ್ಲಿ 16 ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ಡಿಸೆಂಬರ್ 25ರಂದು ಚಕ್ಮಾ ಕೊನೆಯುಸಿರೆಳೆದಿದ್ದರು.
*ನಾವು ಚೈನೀಸ್ ಅಲ್ಲ, ಇಂಡಿಯನ್ಸ್
“ನಾವು ಚೀನಿಯರಲ್ಲ… ನಾವು ಭಾರತೀಯರು. ಅದನ್ನು ಸಾಬೀತುಪಡಿಸಲು ನಾವು ಯಾವ ಪ್ರಮಾಣಪತ್ರವನ್ನು ತೋರಿಸಬೇಕು?” ಜನಾಂಗೀಯ ದಾಳಿಗೊಳಗಾಗುವ ಮುನ್ನ ಚಕ್ಮಾ ಹೇಳಿದ ಮಾತು ಇದು. ಚಕ್ಮಾರನ್ನು ಚೀನಾದವರು ಎಂದು ಕೂಗಿ ನಿಂದಿಸಲಾಗಿತ್ತು. ಈಶಾನ್ಯ ಭಾರತೀಯರ ಮೇಲಿನ ತಾರತಮ್ಯದ ಕೂಗು, ಕೀಟಲೆಗಳು ಇತರರಿಗೆ ತಮಾಷೆಯಾಗಿ ಕಾಣಬಹುದು. ಆದರೆ ತಮ್ಮದೇ ದೇಶದಲ್ಲಿ ತಮ್ಮದೇ ದೇಶದ ಜನರು ಪರಕೀಯರೆಂದು ಮೂದಲಿಸುವಾಗ ಈಶಾನ್ಯ ರಾಜ್ಯಗಳ ಜನರಿಗೆ ಹೇಗಾಗಿರಬೇಡ?
ಉತ್ತರ ಭಾರತದ ಹುಡುಗಿ ತನ್ನನ್ನು ಜಪಾನೀಸ್, ದಕ್ಷಿಣ ಕೊರಿಯನ್ ಅಥವಾ ಚೈನೀಸ್ ಎಂದು ಗುರುತಿಸಿಕೊಂಡರೆ ಅವಳನ್ನು ಗೌರವಿಸಲಾಗುತ್ತದೆ. ಆದರೆ ಅವಳು ಈಶಾನ್ಯದವಳು ಎಂದು ಹೇಳಿದರೆ ಆಕೆಯನ್ನು ಅಪಹಾಸ್ಯ ಮಾಡಲಾಗುತ್ತದೆ. ಅವರ ವಿಶಿಷ್ಟ ಮಂಗೋಲಾಯ್ಡ್ ವೈಶಿಷ್ಟ್ಯಗಳಿಂದಾಗಿ ಅವರು ಇತರ ರಾಜ್ಯದ ಜನರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅವರು ಭಾರತೀಯರಾಗಿದ್ದರೂ ‘ಚಿಂಕಿ’, ‘ಮೊಮೊ’, ‘ಚೌಮೇನ್’ ಎಂಬ ಅಡ್ಡಹೆಸರುಗಳಿಂದ ಅವರನ್ನು ಗುರುತಿಸಲಾಗುತ್ತದೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಸ್ಟೀರಿಯೊಟೈಪ್ ಗಳೇ ಇದಕ್ಕೆಲ್ಲ ಕಾರಣ.
*ಈಶಾನ್ಯ ಭಾರತದಲ್ಲೂ ಇದೆ ತಾರತಮ್ಯ
ದುರದೃಷ್ಟವಶಾತ್, ಈಶಾನ್ಯ ಭಾರತದಲ್ಲೂ ಆ ರೀತಿಯ ತಾರತಮ್ಯವಿದೆ. ಅಲ್ಲಿ ಬಿಳಿ ಮತ್ತು ಕಪ್ಪು ಚರ್ಮದ ಬಗ್ಗೆ ಇರುವ ವರ್ತನೆಗಳು ಭಾರತದ ಮುಖ್ಯಭೂಭಾಗದಲ್ಲಿರುವಂತೆಯೇ ಇರುತ್ತವೆ. ಪ್ರಮುಖ ವ್ಯತ್ಯಾಸವೆಂದರೆ ಪೂರ್ವ ಏಷ್ಯಾದ ಜನರ ವಿರುದ್ಧ ತಾರತಮ್ಯ ಮಾಡುವ ಬದಲು, ದಕ್ಷಿಣ ಏಷ್ಯಾದ ಜನರೇ ಅಲ್ಲಿಗೆ ಆಗಾಗ್ಗೆ ಗುಂಪು ಹಿಂಸಾಚಾರವನ್ನು ಎದುರಿಸುತ್ತಾರೆ.
ಭಾರತದ ಈಶಾನ್ಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ನಡುವಿನ ರೇಖೆಯು ಬ್ರಿಟಿಷ್ ವಸಾಹತುಶಾಹಿ ನೀತಿ ನಿರೂಪಕರು ಎಳೆದ ಕಾಲ್ಪನಿಕ ರೇಖೆಯೊಂದಿಗೆ ಹೆಚ್ಚಾಗಿ ಹೊಂದಿಕೆಯಾಗುತ್ತದೆ. ಇದು ಪೂರ್ವ ಏಷ್ಯಾದ ಜನಾಂಗೀಯ ಪ್ರಕಾರದ ಬುಡಕಟ್ಟು ಜನಾಂಗದವರು ವಾಸಿಸುವ ಬೆಟ್ಟಗಳನ್ನು ದಕ್ಷಿಣ ಏಷ್ಯಾದಂತೆ ಕಾಣುವ ಜನರು ವಾಸಿಸುವ ಸುತ್ತಮುತ್ತಲಿನ ಬಯಲು ಪ್ರದೇಶಗಳಿಂದ ಬೇರ್ಪಡಿಸುತ್ತದೆ. ಆ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಭಾಗ ಬಾಂಗ್ಲಾದೇಶದಲ್ಲಿದೆ. ಭಾರತದ ಅತಿ ಉದ್ದದ ಭೂ ಗಡಿ ಬಾಂಗ್ಲಾದೇಶದೊಂದಿಗೆ ಇದ್ದು, ಇದು ನಾಲ್ಕು ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ, ಮಿಜೋರಾಂ ಮತ್ತು ಅಸ್ಸಾಂಗಳೊಂದಿಗೆ ಗಡಿಗಳನ್ನು ಹಂಚಿಕೊಳ್ಳುತ್ತದೆ. 1971ರಲ್ಲಿ ಬಾಂಗ್ಲಾದೇಶ ರಚನೆಗಿಂತ ಬಹಳ ಹಿಂದೆಯೇ “ಬಾಂಗ್ಲಾದೇಶಿ” ವಲಸೆಯ ಸಮಸ್ಯೆ ಇತ್ತು.
1950 ಮತ್ತು 1960ರ ದಶಕಗಳಲ್ಲಿ ನಡೆದ ಅಸ್ಸಾಂ ಗಲಭೆಗಳು ಹಾಗೂ 1987, 1991 ಮತ್ತು 1992ರಲ್ಲಿ ಮೇಘಾಲಯದಲ್ಲಿ “ವಿದೇಶಿಯರನ್ನು” ಹೊರಹಾಕುವ ಗುರಿಯನ್ನು ಹೊಂದಿದ್ದ ಗುಂಪು ಹಿಂಸಾಚಾರಗಳು ನಡೆದವು. ಈ ಸಂದರ್ಭದಲ್ಲಿ ಬೀದಿಗಳಲ್ಲಿ ಅನ್ಯ ದೇಶೀಯರು ಯಾರು ಎಂಬುದನ್ನು ದೈಹಿಕ ನೋಟದಿಂದಲೇ ಕಂಡುಹಿಡಿಯಲಾಗುತ್ತಿತ್ತು. ಈ ಹೊತ್ತಿನಲ್ಲಿ “ಬಾಂಗ್ಲಾದೇಶಿಯಂತೆ ಕಾಣುವ” ಜನರು ಗುರಿಯಾಗುವ ಸಾಧ್ಯತೆ ಇತ್ತು. ಇಲ್ಲಿ ಬಂಗಾಳಿ ಭಾಷೆಯನ್ನು ಮಾತನಾಡುವವರಾಗಿರುವುದು ದೃಢೀಕರಣ ಪರೀಕ್ಷೆಯಾಗಿತ್ತು. ಈ ಹಿಂಸಾಚಾರವು ಅಂತಿಮವಾಗಿ ಬಿಹಾರಿಗಳು ಮತ್ತು ಮಾರ್ವಾಡಿಗಳಂತಹ ಮುಖ್ಯಭೂಭಾಗದ ಭಾರತೀಯ ಸಮುದಾಯಗಳ ವಿರುದ್ಧ ಸಶಸ್ತ್ರ ಉಗ್ರಗಾಮಿ ಗುಂಪುಗಳ ನೇತೃತ್ವದಲ್ಲಿ ಸಾಮಾನ್ಯೀಕೃತ ದಾಳಿಗಳಾಗಿ ರೂಪಾಂತರಗೊಂಡಿತು.
*ನಾವು ಚೀನಾದವರಲ್ಲ; ನ್ಯಾಯಕ್ಕಾಗಿ ವಿದ್ಯಾರ್ಥಿಗಳ ಕೂಗು
ಹೊಸ ವರ್ಷದ ಮುನ್ನಾದಿನದಂದು ದಿಲ್ಲಿಯ ಜಂತರ್ ಮಂತರ್ ನಲ್ಲಿ “Justice for Anjel Chakma” ಮತ್ತು “We are not Chinese” ಎಂಬ ಘೋಷಣೆಗಳು ಪ್ರತಿಧ್ವನಿಸಿದವು. ಡೆಹ್ರಾಡೂನ್ ನಲ್ಲಿ ಜನಾಂಗೀಯ ಪ್ರೇರಿತ ದಾಳಿಯ ನಂತರ ಸಾವಿಗೀಡಾದ ತ್ರಿಪುರಾದ ಏಂಜಲ್ ಚಕ್ಮಾ ಸಾವು ಖಂಡಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ ವಿದ್ಯಾರ್ಥಿಗಳ ಘೋಷಣೆಯಾಗಿತ್ತು ಅದು. ನಗರದಾದ್ಯಂತದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲಿ ಸೇರಿದ್ದು, ಕೆಲವರು “ಈಶಾನ್ಯ ಸಮುದಾಯವನ್ನು ರಕ್ಷಿಸಿ”, “ಜನಾಂಗೀಯ ವಿರೋಧಿ ಕಾನೂನುಗಳನ್ನು ಜಾರಿಗೆ ತನ್ನಿ” ಮತ್ತು “ಜನಾಂಗೀಯ ಅಪರಾಧಕ್ಕೆ ಶೂನ್ಯ ಸಹಿಷ್ಣುತೆ” ಎಂಬ ಬರಹಗಳನ್ನು ಹೊಂದಿರುವ ಪೋಸ್ಟರ್ಗಳನ್ನು ಹಿಡಿದಿದ್ದರು.
*ಈಶಾನ್ಯ ಜನರನ್ನು ರಕ್ಷಿಸಲು ಜನಾಂಗೀಯ ವಿರೋಧಿ ಕಾನೂನು ಜಾರಿಗೆ ಒತ್ತಾಯ
ದೇಶದ ವಿವಿಧ ಭಾಗಗಳಲ್ಲಿ ವಾಸಿಸುವ ಈಶಾನ್ಯ ಜನರ ರಕ್ಷಣೆಗಾಗಿ ಸಮಗ್ರ ಜನಾಂಗೀಯ ವಿರೋಧಿ ಕಾನೂನನ್ನು ಜಾರಿಗೆ ತರುವಂತೆ ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿಯ ಕಿರಿಯ ಮಿತ್ರಪಕ್ಷವಾದ ತಿಪ್ರಾ ಮೋಥಾ ಪಕ್ಷ (TMP) ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟಿಎಂಪಿ ವಕ್ತಾರರಾದ ರಾಜೇಶ್ವರ್ ದೇಬ್ಬರ್ಮಾ, ಸಿ.ಕೆ. ಜಮಾತಿಯಾ ಮತ್ತು ಆಂಥೋನಿ ದೇಬ್ಬರ್ಮಾ, ನಿರ್ದಿಷ್ಟ ಜನಾಂಗೀಯ ವಿರೋಧಿ ಕಾನೂನಿನ ಅನುಪಸ್ಥಿತಿಯು ತಾರತಮ್ಯ ಮತ್ತು ಜನಾಂಗೀಯ ಪ್ರೇರಿತ ಹಿಂಸಾಚಾರದ ಘಟನೆಗಳು ಅನಿಯಂತ್ರಿತವಾಗಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ ಎಂದರು. ಅಂತಹ ಕಾನೂನನ್ನು ಜಾರಿಗೆ ತರುವುದರಿಂದ ಜನಾಂಗೀಯತೆಯ ವಿರುದ್ಧ ವ್ಯವಸ್ಥಿತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದು ತಾರತಮ್ಯದ ಮನಸ್ಥಿತಿಗಳನ್ನು ನಿಗ್ರಹಿಸಲು ಮತ್ತು ಈಶಾನ್ಯದ ಜನರನ್ನು ಗುರಿಯಾಗಿಸಿಕೊಂಡು ನಡೆಯುವ ಘೋರ ಕೃತ್ಯಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
*M.P. Bezbaruah ಸಮಿತಿ ಏನು ಹೇಳುತ್ತದೆ?
ಅರುಣಾಚಲ ಪ್ರದೇಶದ 19 ವರ್ಷದ ವಿದ್ಯಾರ್ಥಿ ನಿಡೋ ತಾನಿಯಮ್ ಸಾವಿನ ನಂತರ ಈಶಾನ್ಯ ಮಂಡಳಿಯ ಸದಸ್ಯರಾದ ಎಂ.ಪಿ. ಬೆಜ್ಬರುವಾ ನೇತೃತ್ವದಲ್ಲಿ ಬೆಜ್ಬರುವಾ ಸಮಿತಿಯನ್ನು ಸ್ಥಾಪಿಸಲಾಗಿತ್ತು. ದೇಶದ ಇತರ ಪ್ರದೇಶಗಳಲ್ಲಿ, ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ವಾಸಿಸುವ ಈಶಾನ್ಯ ಭಾರತದ ಜನರ ಸಮಸ್ಯೆಗಳನ್ನು ಆಲಿಸುವುದು ಸಮಿತಿಯ ಕರ್ತವ್ಯವಾಗಿತ್ತು.
ಈಶಾನ್ಯ ಭಾರತದ ಜನರ ವಿರುದ್ಧದ ಜನಾಂಗೀಯ ತಾರತಮ್ಯವನ್ನು ಪರಿಹರಿಸಲು ಬೆಜ್ಬರುವಾ ಸಮಿತಿಯು ಹೊಸ ಜನಾಂಗೀಯ ವಿರೋಧಿ ಕಾನೂನು ಅಥವಾ ಐಪಿಸಿ (ಭಾರತೀಯ ದಂಡ ಸಂಹಿತೆ)ಗೆ ತಿದ್ದುಪಡಿಗಳನ್ನು ಶಿಫಾರಸು ಮಾಡಿತ್ತು. ಹೊಸ ಸೆಕ್ಷನ್ಗಳು 153C (ಪೂರ್ವಾಗ್ರಹಪೀಡಿತ ಕೃತ್ಯಗಳು) ಮತ್ತು 509A (ಜನಾಂಗವನ್ನು ಆಧರಿಸಿದ ಅವಮಾನಕರ ಪದಗಳು/ಸನ್ನೆಗಳು) ಅಡಿಯಲ್ಲಿ ಕಠಿಣ ದಂಡಗಳೊಂದಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬೇಕೆಂದು ಸೂಚಿಸಿತ್ತು. ಜನಾಂಗೀಯ ತಾರತಮ್ಯವನ್ನು ಪರಿಹರಿಸಲು ಕಾನೂನು ಜಾರಿಗೆ ತರಬೇಕೆಂದು ಸಮಿತಿ ಶಿಫಾರಸು ಮಾಡಿದ್ದರೂ ಅದು ಇನ್ನೂ ಜಾರಿಯಾಗಿಲ್ಲ. ಜನಾಂಗೀಯ ದಾಳಿಗಳನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಒತ್ತಾಯಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ.
*ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಏನಿದೆ?
ಚಕ್ಮಾ ಪ್ರಕರಣದ ನಂತರ ಸುಪ್ರೀಂ ಕೋರ್ಟ್ನ ವಕೀಲ ಅನೂಪ್ ಪ್ರಕಾಶ್ ಅವಸ್ಥಿ ಸಲ್ಲಿಸಿದ ಅರ್ಜಿಯಲ್ಲಿ, ದ್ವೇಷದಿಂದ ಕೂಡಿದ ಮತ್ತು ಜನಾಂಗೀಯ ಪ್ರೇರಣೆಯಿಂದ ಈ ಅಪರಾಧ ನಡೆದಿದ್ದರೂ, ನಮ್ಮ ಆರಂಭಿಕ ಕ್ರಿಮಿನಲ್ ನ್ಯಾಯ ಪ್ರತಿಕ್ರಿಯೆ ವ್ಯವಸ್ಥೆಯಲ್ಲಿ ಜನಾಂಗೀಯ ಅಪರಾಧಗಳನ್ನು ಸಾಮಾನ್ಯ ಅಪರಾಧವೆಂದು ಪರಿಗಣಿಸುವ ಯಾವುದೇ ಕಾರ್ಯವಿಧಾನ ಲಭ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ.
ಏಂಜಲ್ ಚಕ್ಮಾ ಅವರ ಹತ್ಯೆ ಒಂದು ಪ್ರತ್ಯೇಕ ಘಟನೆಯಲ್ಲ, ಆದರೆ ಈಶಾನ್ಯ ರಾಜ್ಯಗಳ ನಾಗರಿಕರ ವಿರುದ್ಧದ ದೀರ್ಘಕಾಲದ ಜನಾಂಗೀಯ ಹಿಂಸಾಚಾರದ ಮಾದರಿಯ ಭಾಗವಾಗಿದೆ. ಇದರಲ್ಲಿ 2014ರಲ್ಲಿ ದಿಲ್ಲಿಯಲ್ಲಿ ಅರುಣಾಚಲದ ವಿದ್ಯಾರ್ಥಿ ನಿಡೋ ತಾನಿಯಮ್ ಸಾವು ಹಾಗೂ ಮೆಟ್ರೋಪಾಲಿಟನ್ ನಗರಗಳಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಮೇಲೆ ನಡೆದ ಹಲವಾರು ಹಲ್ಲೆಗಳು ಸೇರಿವೆ. ಈ ವಿದ್ಯಮಾನವನ್ನು ಭಾರತ ಒಕ್ಕೂಟವು ಸಂಸತ್ತಿನ ಪ್ರತಿಕ್ರಿಯೆಗಳಲ್ಲಿ ಔಪಚಾರಿಕವಾಗಿ ಒಪ್ಪಿಕೊಂಡಿದ್ದರೂ, ಯಾವುದೇ ಮೀಸಲಾದ ಶಾಸಕಾಂಗ ಅಥವಾ ಸಂಸ್ಥಾತ್ಮಕ ಚೌಕಟ್ಟಿನ ಮೂಲಕ ಇದನ್ನು ಪರಿಹರಿಸಲಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
‘ಜನಾಂಗೀಯ ನಿಂದನೆ’ಯನ್ನು ದ್ವೇಷ ಅಪರಾಧದ ಪ್ರತ್ಯೇಕ ವರ್ಗವೆಂದು ಗುರುತಿಸುವ ಶಾಸನ ಜಾರಿಗೆ ಬರುವವರೆಗೆ ಮಧ್ಯಂತರವಾಗಿ ಸೂಕ್ತ ರಿಟ್ ಹೊರಡಿಸುವಂತೆ, ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವಂತೆ, ಜನಾಂಗೀಯ ನಿಂದನೆಯನ್ನು ದ್ವೇಷ ಅಪರಾಧಗಳ ಪ್ರತ್ಯೇಕ ವರ್ಗವೆಂದು ಗುರುತಿಸಿ ಅದರ ಅನುಗುಣ ಶಿಕ್ಷಾ ಪ್ರಮಾಣವನ್ನು ನಿಗದಿಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಜನಾಂಗೀಯ ಅಪರಾಧಗಳನ್ನು ವರದಿ ಮಾಡಲು ಮತ್ತು ಮರುಪರಿಶೀಲಿಸಲು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ನೋಡಲ್ ಏಜೆನ್ಸಿ ಅಥವಾ ಶಾಶ್ವತ ಸಂಸ್ಥೆ, ಆಯೋಗ ಅಥವಾ ನಿರ್ದೇಶನಾಲಯ ಸ್ಥಾಪಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಜನಾಂಗೀಯ ಅಪರಾಧಗಳನ್ನು ನಿಭಾಯಿಸಲು ಮೆಟ್ರೋ ಪ್ರದೇಶ ಅಥವಾ ಜಿಲ್ಲಾವಾರು ವಿಶೇಷ ಪೊಲೀಸ್ ಘಟಕ ಸ್ಥಾಪಿಸುವುದನ್ನೂ ಅರ್ಜಿಯಲ್ಲಿ ಕೋರಲಾಗಿದೆ. ಈಶಾನ್ಯ ವ್ಯಕ್ತಿಗಳ ಮೇಲಿನ ಪುನರಾವರ್ತಿತ ದಾಳಿಗಳನ್ನು “ನಿರಂತರ ಸಾಂವಿಧಾನಿಕ ವೈಫಲ್ಯ” ಎಂದು ಹೇಳಿದ್ದು, “ಸಮದರ್ಶನ ಮತ್ತು ವಸುಧೈವ ಕುಟುಂಬಕಂ” ತತ್ವಗಳು ಜನಾಂಗೀಯ ತಾರತಮ್ಯಕ್ಕೆ ವಿರುದ್ಧವಾಗಿವೆ. ಆದ್ದರಿಂದ ಜನಾಂಗೀಯ ಹಿಂಸಾಚಾರದ ಕೃತ್ಯಗಳು ಅಸಂವಿಧಾನಿಕ ಮಾತ್ರವಲ್ಲದೆ ನಾಗರಿಕತೆಯ ವಿರೋಧಿಯೂ ಆಗಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.







