ಅಂಕಿತ ಭಂಡಾರಿ ಹತ್ಯೆ ಪ್ರಕರಣ ಮತ್ತೆ ಮುನ್ನೆಲೆಗೆ: ತನ್ನ ಪಾತ್ರವನ್ನು ಅಲ್ಲಗಳೆದ ಬಿಜೆಪಿ ನಾಯಕ ದುಷ್ಯಂತ್ ಗೌತಮ್

ಅಂಕಿತ ಭಂಡಾರಿ / ದುಷ್ಯಂತ್ ಗೌತಮ್ (Photo:X: newindianexpress.com)
ಹೊಸದಿಲ್ಲಿ: ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಪ್ರಕರಣದಲ್ಲಿ ತಮ್ಮ ಪಾತ್ರವಿದೆ ಎಂಬ ವರದಿಗಳನ್ನು ಶುಕ್ರವಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ಅಲ್ಲಗಳೆದಿದ್ದಾರೆ. ಪ್ರಾಮಾಣಿಕತೆ ಹಾಗೂ ನಿಷ್ಠೆ ನನ್ನ ರಾಜಕೀಯ ಮತ್ತು ಸಾಮಾಜಿಕ ಜೀವನದ ಹೆಗ್ಗುರುತಾಗಿದೆ ಎಂದು ಹೇಳಿದ್ದಾರೆ.
ಮಾಜಿ ಬಿಜೆಪಿ ಶಾಸಕ ಸುರೇಶ್ ರಾಥೋರ್ ಅವರ ಪತ್ನಿ ಊರ್ಮಿಳಾ ಸನಾವರ್ ಅವರು ‘ಗಟ್ಟು’ ಎಂಬ ಹೆಸರಿನ ಪಕ್ಷದ ಹಿರಿಯ ನಾಯಕರೊಬ್ಬರು ಅಂಕಿತಾ ಭಂಡಾರಿ ಬಳಿ ಲೈಂಗಿಕ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಆರೋಪಿಸಿದ ಬಳಿಕ ಅಂಕಿತಾ ಭಂಡಾರಿ ಸಾವಿನ ಪ್ರಕರಣ ಮತ್ತೆ ಉತ್ತರಾಖಂಡ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಊರ್ಮಿಳಾ ಸನಾವರ್ ಆಡಿಯೊ ತುಣುಕೊಂದನ್ನು ಬಿಡುಗಡೆಗೊಳಿಸಿದ್ದು, ಆ ಆಡಿಯೊದಲ್ಲಿ ಗೌತಮ್ ಹಾಗೂ ಮತ್ತೊಬ್ಬ ಬಿಜೆಪಿಯ ಹಿರಿಯ ನಾಯಕರನ್ನು ರಾಥೋರ್ ಪ್ರತಿಷ್ಠಿತ ವ್ಯಕ್ತಿಗಳು ಎಂದು ಹೇಳುತ್ತಿರುವುದು ದಾಖಲಾಗಿದೆ.
ಬಳಿಕ, ಇದು AI ಆಡಿಯೊ ತುಣುಕು ಎಂದ ಅಲ್ಲಗಳೆದಿರುವ ರಾಥೋರ್, ಸನಾವರ್ ಪಕ್ಷಕ್ಕೆ ಕಳಂಕ ತಂದಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ವನತಾರಾ ರೆಸಾರ್ಟ್ ನ ಮ್ಯಾನೇಜರ್ ಹಾಗೂ ಮಾಜಿ ಬಿಜೆಪಿ ನಾಯಕ ವಿನೋದ್ ಆರ್ಯರ ಪುತ್ರ ಪುಳಕಿತ್ ಆರ್ಯನ ಲೈಂಗಿಕ ಬಯಕೆಯನ್ನು ಈಡೇರಿಸಲು ಅಂಕಿತಾ ಭಂಡಾರಿ ನಿರಾಕರಿಸಿದ್ದರಿಂದ, ಆಕೆ ಹತ್ಯೆಗೊಳಗಾಗಿದ್ದರು ಎಂದು ಆರೋಪಿಸಲಾಗಿದೆ. ಆಕೆ ನಾಪತ್ತೆಯಾದ ಆರು ದಿನಗಳ ನಂತರ ಅಂದರೆ 2022ರ ಸೆಪ್ಟೆಂಬರ್ 24ರಂದು ರಿಷಿಕೇಶ್ ನಲ್ಲಿರುವ ನಾಲೆಯೊಂದರಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಬಳಿಕ 2022ರಲ್ಲಿ ವಿನೋದ್ ಆರ್ಯರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.







