ಅಂಕಿತಾ ಭಂಡಾರಿ ಕೊಲೆ ಪ್ರಕರಣ | ಸಿಬಿಐ ತನಿಖೆಗೆ ಉತ್ತರಾಖಂಡ ಸಿಎಂ ಶಿಫಾರಸು

Photo Credit : NDTV
ಡೆಹ್ರಾಡೂನ್, ಜ.10: ರಾಜ್ಯ ಸರಕಾರವು 2022ರ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಪ್ರಕಟಿಸಿದ್ದಾರೆ.
ಉತ್ತರಾಖಂಡದ ಋಷಿಕೇಶದಲ್ಲಿ ಮಾಜಿ ಬಿಜೆಪಿ ನಾಯಕ ವಿನೋದ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಅಂಕಿತಾ ಸೆ.18, 2022ರಂದು ನಾಪತ್ತೆಯಾಗಿದ್ದರು.
ಮರುದಿನ ಪುಲ್ಕಿತ್, ರೆಸಾರ್ಟ್ ಮ್ಯಾನೇಜರ್ ಸೌರಭ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ ಗುಪ್ತಾ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ನಂತರ ಅವರು ಜಗಳದ ಬಳಿಕ ಅಂಕಿತಾರನ್ನು ಕಾಲುವೆಗೆ ತಳ್ಳಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದರು. ನಾಪತ್ತೆಯಾದ ಆರು ದಿನಗಳ ಬಳಿಕ ಅಂಕಿತಾ ಅವರ ಮೃತದೇಹ ಋಷಿಕೇಶದ ಚಿಲ್ಲಾ ಕಾಲುವೆಯಲ್ಲಿ ಪತ್ತೆಯಾಗಿತ್ತು.
ವಿಷಯ ಬೆಳಕಿಗೆ ಬಂದ ಬಳಿಕ ಬಿಜೆಪಿ ವಿನೋದ ಆರ್ಯ ಮತ್ತು ಅವರ ಇನ್ನೋರ್ವ ಪುತ್ರ ಅಂಕಿತ ಆರ್ಯರನ್ನು ಪಕ್ಷದಿಂದ ಉಚ್ಚಾಟಿಸಿತ್ತು.
ಆರೋಪಿಗಳು ಅಂಕಿತಾರನ್ನು ವೇಶ್ಯಾವೃತ್ತಿಗೆ ತಳ್ಳಲು ಪ್ರಯತ್ನಿಸಿದ್ದರೆಂದು ಸಾಬೀತುಗೊಳಿಸುವ ಸಾಕ್ಷ್ಯಾಧಾರಗಳು ನಂತರ ಲಭ್ಯವಾಗಿದ್ದವು. ‘ವಿಐಪಿ’ಯೋರ್ವರಿಗೆ ‘ವಿಶೇಷ ಸೇವೆ’ ಒದಗಿಸಲು ನಿರಾಕರಿಸಿದ್ದಕ್ಕೆ ಅಂಕಿತಾರನ್ನು ಕೊಲ್ಲಲಾಗಿದೆ ಎಂದು ಆರೋಪಿಸಲಾಗಿತ್ತು.
ಮೇ 2025ರಲ್ಲಿ ಪುಲ್ಕಿತ್, ಭಾಸ್ಕರ್ ಮತ್ತು ಗುಪ್ತಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಧಾಮಿ ಅಂಕಿತಾಳ ಹೆತ್ತವರೊಂದಿಗೆ ಮಾತುಕತೆ ನಡೆಸಿದ ಎರಡು ದಿನಗಳ ಬಳಿಕ ಸಿಬಿಐ ತನಿಖೆಗೆ ಒಪ್ಪಿಸುವ ಕುರಿತು ಪ್ರಕಟಣೆ ಹೊರಬಿದ್ದಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಅಂಕಿತಾರ ಹೆತ್ತವರು ಆಗ್ರಹಿಸಿದ್ದರು. ಈಗಲೂ ಗುರುತು ಪತ್ತೆಯಾಗದೆ ಉಳಿದಿರುವ ‘ವಿಐಪಿ’ಯ ಕಾರಣದಿಂದಲೇ ತಮ್ಮ ಪುತ್ರಿಯನ್ನು ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಹಲವಾರು ನಾಗರಿಕ ಗುಂಪುಗಳು ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದವು.







