ಗ್ಯಾಂಗ್ಸ್ಟರ್ ಅನ್ಮೋಲ್ ಬಿಷ್ಣೋಯಿಗೆ 11 ದಿನಗಳ ಎನ್ಐಎ ಕಸ್ಟಡಿ

Photo credit: indiatoday.com
ಹೊಸದಿಲ್ಲಿ,ನ.19:ಅಮೆರಿಕದಿಂದ ಗಡಿಪಾರುಗೊಂಡಿರುವ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕುಖ್ಯಾತ ಗ್ಯಾಂಗ್ಸ್ಟರ್ ಅನ್ಮೋಲ್ ಬಿಷ್ಣೋಯಿಯನ್ನು ಎನ್ಐಎ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಜೈಲಿನಲ್ಲಿರುವ ಪಾತಕಿ ಲಾರೆನ್ಸ್ ಬಿಷ್ಣೋಯಿಯ ಸಹೋದರನಾದ ಅನ್ಮೋಲ್ನನ್ನು ಮಂಗಳವಾರ ಅಮೆರಿಕವು ಭಾರತಕ್ಕೆ ಗಡಿಪಾರು ಮಾಡಿತ್ತು.
ಅನ್ಮೋಲ್ ಬಿಷ್ಣೋಯಿಯನ್ನು ದಿಲ್ಲಿ ವಿಮಾನನಿಲ್ದಾಣದಲ್ಲಿ ಎನ್ಐಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡ ಬಳಿಕ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಆತನನ್ನು 11 ದಿನಗಳ ಎನ್ಐಎ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2022ರಿಂದಲೂ ಅನ್ಮೋಲ್ ತಲೆಮರೆಸಿಕೊಂಡಿದ್ದನು. ಭಯೋತ್ಪಾದಕರು ಹಾಗೂ ಗ್ಯಾಂಗ್ಸ್ಟರ್ ಗಳ ಸಂಚಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಈತ 19ನೇಯವನಾಗಿದ್ದಾನೆ. 2020 ಹಾಗೂ 2023ರ ನಡುವೆ ಭಯೋತ್ಪಾದಕನೆಂದು ಗುರುತಿಸಲಾದ ಗೋಲ್ಡ್ ಬ್ರಾರ್ ಗೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ನೆರವಾದ ಆರೋಪವನ್ನು ಆತ ಆಮೆರಿಕದಲ್ಲಿ ಎದುರಿಸುತ್ತಿದ್ದಾನೆ.
ಎನ್ಐಎ ಪ್ರಕಾರ, ಲಾರೆನ್ಸ್ ಬಿಷ್ಣೋಯಿ ಬಂಧನದ ಬಳಿಕ ಆತನ ಜಾಲವನ್ನು ಅನ್ಮೋಲ್ ಅಮೆರಿಕದಿಂದಲೇ ನಿರ್ವಹಿಸುತ್ತಿದ್ದನು. ವಿದೇಶದಿಂದಲೇ ಇದ್ದುಕೊಂಡು
ಭಾರತದಲ್ಲಿರುವ ಗ್ಯಾಂಗ್ ನ ಸದಸ್ಯರ ಜೊತೆ ಸಮನ್ವಯ ಸಾಧಿಸುವುದು, ಶೂಟರ್ಗಳಿಗೆ ಆಶ್ರಯ ಹಾಗೂ ಸಾಗಾಟದ ಏರ್ಪಾಡುಗಳನ್ನು ಮಾಡುತ್ತಿದ್ದ ಮತ್ತು ವಿದೇಶದಲ್ಲೇ ಇದ್ದುಕೊಂಡು ಸುಲಿಗೆ ಜಾಲವನ್ನು ನಡೆಸುತ್ತಿದ್ದ
ಕಳೆದ ವರ್ಷ ಮುಂಬೈಯಲ್ಲಿ ಮಹಾರಾಷ್ಟ್ರದ ಎನ್ಸಿಪಿ ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ ಅವರ ಹತ್ಯೆಪ್ರಕರಣದಲ್ಲೂ ಶಾಮೀಲಾಗಿರುವ ಆರೋಪವನ್ನು ಅನ್ಮೋಲ್ ಎದುರಿಸುತ್ತಿದ್ದಾನೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಗುಂಡು ಹಾರಾಟ ನಡೆಸಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಪಂಜಾಬಿ ಗಾಯಕ ಸಿದ್ಧು ಮೂಸೆವಾಲಾ ಕೊಲೆ ಪ್ರಕರಣದಲ್ಲೂ ಆತನ ಕೈವಾಡವಿರುವುದಾಗಿ ಆರೋಪಿಸಲಾಗಿದೆ.







