ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಜ್ಞಾನಶೇಖರನ್ ತಪ್ಪಿತಸ್ಥ : ನ್ಯಾಯಾಲಯ ತೀರ್ಪು

Photo | indiatoday
ಚೆನ್ನೈ : ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಜ್ಞಾನಶೇಖರನ್ ತಪ್ಪಿತಸ್ಥ ಎಂದು ಚೆನ್ನೈ ನ್ಯಾಯಾಲಯ ತೀರ್ಪು ನೀಡಿದೆ.
ಸೆಷನ್ಸ್ ನ್ಯಾಯಾಧೀಶರಾದ ಎಂ.ರಾಜಲಕ್ಷ್ಮಿ ಈ ಮಹತ್ವದ ತೀರ್ಪನ್ನು ನೀಡಿದ್ದು, ಜೂನ್ 2ರಂದು ಶಿಕ್ಷೆಯನ್ನು ಪ್ರಕಟಿಸಲಿದ್ದಾರೆ.
ವಯಸ್ಸಾದ ತಾಯಿ ಮತ್ತು ಮಗಳು ಎಂಟನೇ ತರಗತಿಯಲ್ಲಿ ಓದುತ್ತಿರುವುದರಿಂದ ಕನಿಷ್ಠ ಶಿಕ್ಷೆ ವಿಧಿಸುವಂತೆ ಜ್ಞಾನಶೇಖರನ್ ನ್ಯಾಯಾಲಯವನ್ನು ಕೋರಿದ್ದಾನೆ.
2024ರ ಡಿಸೆಂಬರ್ನಲ್ಲಿ ಸಂತ್ರಸ್ತೆ ಮತ್ತು ಆಕೆಯ ಗೆಳೆಯ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿದ್ದಾಗ ಅವರ ವೀಡಿಯೊವನ್ನು ರೆಕಾರ್ಡ್ ಮಾಡಿ, ನಂತರ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಜ್ಞಾನಶೇಖರನ್ ಅಣ್ಣಾ ವಿವಿ ಕ್ಯಾಂಪಸ್ ಬಳಿ ಬಿರಿಯಾನಿ ಅಂಗಡಿಯನ್ನು ನಡೆಸುತ್ತಿದ್ದ. ಈ ದಾಳಿಯು ಕ್ಯಾಂಪಸ್ ಬಳಿ ಭದ್ರತಾ ಲೋಪದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತ್ತು. ಈ ಕುರಿತು ಕೊಟ್ಟೂರುಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





