ಉಪವಾಸ ಕ್ಯಾನ್ಸರನ್ನು ಗುಣಪಡಿಸುತ್ತದೆ ಎಂದ ಅಣ್ಣಾಮಲೈ; ವೈದ್ಯರು ಮತ್ತು ಅಧ್ಯಯನಗಳು ಹೇಳಿದ್ದೇನು?

ಅಣ್ಣಾಮಲೈ | Photo Credit : PTI
ವೈದ್ಯರಾದ ವೇಲುಮಣಿ ಹೇಳುವ ಪ್ರಕಾರ ಉಪವಾಸವೊಂದರಿಂದಲೇ ಕ್ಯಾನ್ಸರ್ ಅನ್ನು ತೊಡೆದು ಹಾಕಬಹುದಾದರೆ ಸಾವಿರಾರು ಆಂಕೊಲಜಿ ಆಸ್ಪತ್ರೆಗಳು ಇರುವುದು ವ್ಯರ್ಥ!
ಬಿಜೆಪಿ ನಾಯಕ ಕೆ ಅಣ್ಣಾಮಲೈ ಇತ್ತೀಚೆಗೆ ಉಪವಾಸದಿಂದ ಕ್ಯಾನ್ಸರ್ ತೊಡೆದು ಹಾಕಬಹುದು ಎಂದು ಹೇಳಿರುವುದು ಬಹಳ ಟೀಕೆಗೆ ಗುರಿಯಾಗಿದೆ. ಮುಖ್ಯವಾಗಿ ವೈದ್ಯಕೀಯ ವೃತ್ತಿಪರರು ಮತ್ತು ಕೈಗಾರಿಕೋದ್ಯಮಿಗಳು ವೈಜ್ಞಾನಿಕವಾಗಿ ತಳಹದಿಯಿಲ್ಲದದ ಇಂತಹ ಹೇಳಿಕೆ ಬಹಳ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.
ಅಣ್ಣಾಮಲೈ ಅವರ ಕ್ಯಾನ್ಸರ್ ಹೇಳಿಕೆ:
ಅಣ್ಣಾಮಲೈ ಹೇಳಿರುವ ಪ್ರಕಾರ 24 ಗಂಟೆ ಉಪವಾಸ ಮಾಡಿದರೆ ಕ್ಯಾನ್ಸರ್ ಜೀವಕೋಶಗಳಿಗೆ ಶಕ್ತಿ ಸರಬರಾಜು ನಿಲ್ಲುತ್ತದೆ ಮತ್ತು ಅವು ಸತ್ತು ಹೋಗುತ್ತವೆ ಮತ್ತು ಏಳು ದಿನಗಳ ಉಪವಾಸದಿಂದ ದೇಹದಲ್ಲಿರುವ ಎಲ್ಲಾ ಕ್ಯಾನ್ಸರ್ ಜೀವಕೋಶಗಳನ್ನು ತೊಡೆದು ಹಾಕಬಹುದಾಗಿದೆ. ಅವರು ಪದೇಪದೆ ಆಧುನಿಕ ಜೀವನಶೈಲಿ ಮತ್ತು ಸಂಸ್ಕರಿತ ಆಹಾರ ಸೇವಿಸದೆ, ಉಪವಾಸ, ಹಠಯೋಗ ಮತ್ತು ಅಂಗಮರ್ಧನ ಯೋಗದಂತಹ ಯೋಗಾಭ್ಯಾಸದಿಂದ ಕ್ಯಾನ್ಸರ್ ತೊಡೆದು ಹಾಕಬಹುದು ಎಂದು ಹೇಳುತ್ತಿದ್ದಾರೆ.
ಮುಂದುವರಿದು ಅವರು ಸಲಹೆ ನೀಡಿರುವ ಪ್ರಕಾರ, ಹಿಂದಿನ ತಲೆಮಾರು ಉಪವಾಸ ಸಂಪ್ರದಾಯಗಳನ್ನು ಅನುಸರಿಸಿಕೊಂಡು ಬಂದ ಕಾರಣ ಕ್ಯಾನ್ಸರ್ ಸಮಸ್ಯೆಯನ್ನು ಎದುರಿಸಿಲ್ಲ. ಕ್ಯಾನ್ಸರ್ ಜೀವಕೋಶಗಳು ಸಾಮಾನ್ಯ ಜೀವಕೋಶಗಳಿಗಿಂತ ಹೆಚ್ಚು ಶಕ್ತಿಯನ್ನು ಬಳಸುತ್ತವೆ, ಹೀಗಾಗಿ ಆಹಾರ ಸೇವನೆ ತೊರೆದರೆ ಕ್ಯಾನ್ಸರ್ ಜೀವಕೋಶಗಳು ಸತ್ತು ಹೋಗುತ್ತವೆ!
ಹೇಳಿಕೆ ತಪ್ಪು ಎಂದ ವೈದ್ಯರು
ಥೈರೋಕೇರ್ ಸಂಸ್ಥಾಪಕರಾದ ಡಾ. ಎ. ವೇಲುಮಣಿ ಅವರು ಇಂತಹ ಹೇಳಿಕೆ ಹಾಸ್ಯಾಸ್ಪದ ಎಂದಿದ್ದಾರೆ. ಅವರ ಪತ್ನಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. “2016ರಲ್ಲಿ ತಾನು ಅಂತಹ ಹೇಳಿಕೆಗಳನ್ನು ಕೇಳಿದ್ದರೆ ಚೆನ್ನಾಗಿತ್ತು” ಎಂದು ಅವರು ವ್ಯಂಗ್ಯವಾಡಿದ್ದಾರೆ. ವೇಲುಮಣಿ ಹೇಳುವ ಪ್ರಕಾರ ಉಪವಾಸವೊಂದರಿಂದಲೇ ಕ್ಯಾನ್ಸರ್ ಅನ್ನು ತೊಡೆದು ಹಾಕಬಹುದಾದರೆ ಸಾವಿರಾರು ಆಂಕೊಲಜಿ ಆಸ್ಪತ್ರೆಗಳು ಇರುವುದು ವ್ಯರ್ಥ. ಮಾತ್ರವಲ್ಲದೆ, “ಜಾಗತಿಕವಾಗಿ ವೈದ್ಯಕೀಯ ತಂತ್ರಜ್ಞಾನ ಸಂಸ್ಥೆಗಳು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ವೇಲುಮಣಿ ಮುಂದುವರಿದು, ಜಾಗತಿಕವಾಗಿ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಗಳಿಗಾಗಿ ವ್ಯಾಪಕ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಸೈಕ್ಲೊಟ್ರೊನ್ಗಳು, PET-CT, PET-MR, ಲೀನಿಯರ್ ಅಕ್ಸಲರೇಟರ್ಗಳು, ಗಾಮಾ ನೈಫ್ ವಿಧಾನಗಳೂ, ಪ್ರೊಟೋನ್ ಥೆತಪಿ ಮತ್ತು ರೊಬೊಟಿಕ್ ಸರ್ಜರಿಗಳನ್ನು ಅನುಸರಿಸಲಾಗುತ್ತದೆ.
ಹೇಳಿಕೆಗೆ ವಿರುದ್ಧವಾಗಿರುವ ಸಾಕ್ಷ್ಯಗಳು
ವೈದ್ಯಕೀಯ ಸಾಕ್ಷ್ಯಗಳು ಅಣ್ಣಾಮಲೈ ಹೇಳಿಕೆಗೆ ವಿರುದ್ಧವಾಗಿದೆ. ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಅಧ್ಯಯನದ ಪ್ರಕಾರ ಕ್ಯಾನ್ಸರ್ ಆರೈಕೆಯಲ್ಲಿ ವಿವಿಧ ರೀತಿಯ ಉಪವಾಸ ಮತ್ತು ಕ್ಯಾಲರಿ ನಿರ್ಬಂಧದ ಸಂಶೋಧನೆ ಸೀಮಿತವಾಗಿದೆ.
ಇನ್ಸುಲಿನ್-ಪ್ರಚೋದಿತ ಬೆಳವಣಿಗೆ ಮತ್ತು ಇತರ ಪ್ರಸ್ತುತವೆನಿಸಿದ ಹಾರ್ಮೋನಲ್ ಮತ್ತು ಕ್ಯಾರ್ಸಿನೋಜೆನಿಸಿಸ್ನ ಸೂಚ್ಯಂಕಗಳಾದ ಇತರ ಉರಿಯೂತಗಳ ಮೇಲೆ ಅನಿರ್ದಿಷ್ಟಾವಧಿ ಉಪವಾಸದ ಪರಿಣಾಮಗಳು ಈವರೆಗೂ ಚಿಕಿತ್ಸಾತ್ಮಕವಾಗಿ ಉಪಯುಕ್ತವಲ್ಲ. ಮುಖ್ಯವಾಗಿ ಉಪವಾಸ ಮಾತ್ರದಿಂದ ಕ್ಯಾನ್ಸರ್ ಗುಣವಾಗುವುದು ಅಥವಾ ತೊಡೆದುಹಾಕುತ್ತದೆ ಎಂದು ಸಾಬೀತಾಗಿಲ್ಲ.
ಪ್ರಾಥಮಿಕ ಚಿಕಿತ್ಸೆಯಾಗಿ ಉಪವಾಸದ ಪಾತ್ರ ನಗಣ್ಯ
ನಿರ್ದಿಷ್ಟ ಸಂದರ್ಭದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ದಿಷ್ಟ ಅಡ್ಡಪರಿಣಾಮಗಳನ್ನು ಕಡಿಮೆಗೊಳಿಸಲು ನೆರವಾಗುವ ಸಾಧ್ಯತೆಯಿದೆ. ಆದರೆ ಕೀಮೋಥೆರಪಿ, ರೇಡಿಯೊಥೆರಪಿ ಅಥವಾ ಉದ್ದೇಶಿತ ಔಷಧಿಗಳ ಜೊತೆಗೆ ಬಳಸದೆ ಇದ್ದರೆ ಅರ್ಥಪೂರ್ಣ ಫಲಿತಾಂಶಗಳು ಸಿಗುವುದು ಅಪರೂಪ.
ಕ್ಯೂರಿಯಸ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಪ್ರಕಟವಾದ ಸಮಗ್ರ ಪರಿಶೀಲನೆಯು ಕ್ಯಾನ್ಸರ್ ಗೆ ಉಪವಾಸ ಮಾತ್ರ ಚಿಕಿತ್ಸೆಯಾಗಬಲ್ಲದು ಎನ್ನುವ ಸಿದ್ಧಾಂತವನ್ನು ಸುಳ್ಳೆಂದು ಹೇಳಿದೆ. ಸಮಕಾಲೀನ ಚಿಕಿತ್ಸೆಯ ಜೊತೆಗೆ ಉಪವಾಸವನ್ನು ಪೂರಕವಾಗಿ ಬಳಸಿದಾಗ ಬೆಂಬಲಿತ ಪಾತ್ರವನ್ನು ನಿರ್ವಹಿಸಬಹುದು. ಆದರೆ ಪ್ರಾಥಮಿಕ ಚಿಕಿತ್ಸೆಯಾಗಿ ಉಪವಾಸದ ಪಾತ್ರ ನಗಣ್ಯ ಎಂದು ಅಧ್ಯಯನ ಹೇಳಿದೆ.
ಉಪವಾಸವನ್ನು ಒಂದು ಮಹತ್ವವಾದ ಚಿಕಿತ್ಸೆಯಾಗಿ ಮುಂದಿಡುವುದು ದಾರಿ ತಪ್ಪಿಸುವ ಹೇಳಿಕೆಗಳಾಗಿವೆ ಎಂದು ಅಧ್ಯಯನ ಹೇಳಿದೆ.







