‘ಮುಂಬೈಗೆ ಬರುತ್ತೇನೆ; ಕಾಲು ಕತ್ತರಿಸುವ ಬೆದರಿಕೆಗಳಿಗೆ ಹೆದರುವುದಿಲ್ಲ’: ರಾಜ್ ಠಾಕ್ರೆ ಹೇಳಿಕೆಗೆ ಅಣ್ಣಾಮಲೈ ತಿರುಗೇಟು

ಕೆ. ಅಣ್ಣಾಮಲೈ , ರಾಜ್ ಠಾಕ್ರೆ | Photo Credit : PTI
ಹೊಸದಿಲ್ಲಿ, ಜ.12: ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಅವರ ‘ರಸ್ಮಲೈ’ ಟೀಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕೆ. ಅಣ್ಣಾಮಲೈ, “ಮುಂಬೈಗೆ ಬರುತ್ತೇನೆ; ನನ್ನ ಕಾಲುಗಳನ್ನು ಕತ್ತರಿಸಲು ಪ್ರಯತ್ನಿಸಿ” ಎಂದು ಸವಾಲು ಹಾಕಿದ್ದಾರೆ.
ಚೆನ್ನೈನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈಗೆ ಬಂದರೆ ಕಾಲು ಕತ್ತರಿಸುವುದಾಗಿ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. “ನನ್ನನ್ನು ಬೆದರಿಸಲು ಆದಿತ್ಯ ಠಾಕ್ರೆ ಮತ್ತು ರಾಜ್ ಠಾಕ್ರೆ ಯಾರು? ನಾನು ರೈತನ ಮಗನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಇಂತಹ ಬೆದರಿಕೆಗಳಿಗೆ ನಾನು ಹೆದರಿದ್ದರೆ ಹಳ್ಳಿಯಲ್ಲಿಯೇ ಉಳಿದಿರುತ್ತಿದ್ದೆ. ನಾನು ಮುಂಬೈಗೆ ಬರುತ್ತೇನೆ,” ಎಂದು ಅಣ್ಣಾಮಲೈ ಹೇಳಿದರು.
“ಕಾಮರಾಜ್ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದರೆ ಅವರು ತಮಿಳರಲ್ಲವೇ? ಮುಂಬೈ ವಿಶ್ವದರ್ಜೆಯ ನಗರ ಎಂದರೆ ಮಹಾರಾಷ್ಟ್ರೀಯರು ಅದನ್ನು ನಿರ್ಮಿಸಲಿಲ್ಲವೇ? ಇಂತಹ ಮಾತುಗಳು ಅಜ್ಞಾನವನ್ನು ತೋರಿಸುತ್ತವೆ,” ಎಂದರು.
ಇದಕ್ಕೂ ಒಂದು ದಿನ ಮೊದಲು ಮುಂಬೈನಲ್ಲಿ ನಡೆದ ಯುಬಿಟಿ–ಎಂಎನ್ಎಸ್ ಜಂಟಿ ರ್ಯಾಲಿಯಲ್ಲಿ ರಾಜ್ ಠಾಕ್ರೆ, “ತಮಿಳುನಾಡಿನಿಂದ ಒಬ್ಬ ‘ರಸ್ಮಲೈ’ ಬಂದಿದ್ದಾನೆ. ಇಲ್ಲಿಗೂ ನಿಮಗೂ ಏನು ಸಂಬಂಧ?” ಎಂದು ವ್ಯಂಗ್ಯವಾಡಿದ್ದರು. ಇದೇ ವೇಳೆ 1960–70ರ ದಶಕಗಳಲ್ಲಿ ತಮ್ಮ ಚಿಕ್ಕಪ್ಪ ಬಾಲ್ ಠಾಕ್ರೆ ನೀಡಿದ್ದ ‘ಹಟಾವೊ ಲುಂಗಿ, ಬಜಾವೊ ಪುಂಗಿ’ ಘೋಷಣೆಯನ್ನು ಅವರು ಉಲ್ಲೇಖಿಸಿದ್ದರು.
ಇದಲ್ಲದೆ, ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದವರು ಹಿಂದಿಯನ್ನು ಹೇರಲು ಯತ್ನಿಸಿದರೆ “ಒದೆಯುತ್ತೇನೆ” ಎಂದು ರಾಜ್ ಠಾಕ್ರೆ ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. “ಭಾಷೆಯನ್ನು ದ್ವೇಷಿಸುವುದಿಲ್ಲ; ಆದರೆ ಹೇರಿಕೆ ಸಹಿಸುವುದಿಲ್ಲ. ಭೂಮಿ ಮತ್ತು ಭಾಷೆ ಹೋದರೆ ಎಲ್ಲವೂ ಮುಗಿಯುತ್ತದೆ,” ಎಂದು ಅವರು ಹೇಳಿದ್ದಾರೆ.
ಈ ರ್ಯಾಲಿಯಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ, ಬಿಜೆಪಿಯ ‘ನಕಲಿ ಹಿಂದುತ್ವ’ ವಿರುದ್ಧ ಜಂಟಿ ದಾಳಿ ನಡೆಸಿದರು. ಮುಂಬೈ ಎದುರಿಸುತ್ತಿರುವ ‘ಅಪಾಯ’ವೇ ತಾವು ರಾಜಕೀಯವಾಗಿ ಸಮೀಪವಾಗಿ ಕಾರಣ ಎಂದು ಅವರು ಹೇಳಿದರು. ಮರಾಠಿ ಮನುಷ್ಯ, ಹಿಂದೂಗಳು ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟಿದ್ದೇವೆ ಎಂದು ಉದ್ಧವ್ ಹೇಳಿದರು.
ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ರಾಜ್ಯದಾದ್ಯಂತ 29 ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಿಸಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ, ಪುಣೆ ಮಹಾನಗರ ಪಾಲಿಕೆ ಹಾಗೂ ಪಿಂಪ್ರಿ-ಚಿಂಚ್ವಾಡ್ ಮಹಾನಗರ ಪಾಲಿಕೆ ಸೇರಿ ವಿವಿಧ ಪಾಲಿಕೆಗಳಿಗೆ ಜನವರಿ 15ರಂದು ಮತದಾನ ನಡೆಯಲಿದ್ದು, ಜನವರಿ 16ರಂದು ಮತಎಣಿಕೆ ನಡೆಯಲಿದೆ.







