ದರೋಡೆಕೋರರಿಂದ ಆಪ್ ನಾಯಕ ಅನೋಖ್ ಮಿತ್ತಲ್ ರ ಪತ್ನಿಯ ಹತ್ಯೆ

PC : hindustantimes.com
ಚಂಡಿಗಢ: ಆಮ್ ಆದ್ಮಿ ಪಕ್ಷ (ಆಪ್) ನಾಯಕ ಹಾಗೂ ಖ್ಯಾತ ಉದ್ಯಮಿ ಅನೋಖ್ ಮಿತ್ತಲ್ ಅವರ ಪತ್ನಿ ಲಿಪ್ಸಿ ಅವರನ್ನು ದರೋಡೆಕೋರರು ಕಡಿದು ಕೊಲೆಗೈದ ಆಘಾತಕಾರಿ ಘಟನೆ ಶನಿವಾರ ರಾತ್ರಿ ಇಲ್ಲಿ ನಡೆದಿದೆ.
ಮಿತ್ತಲ್ ಹಾಗೂ ಅವರ ಪತ್ನಿ ಭೋಜನ ಮುಗಿಸಿ ರಾತ್ರಿ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ರೂರ್ಕಾ ಸಮೀಪ ಐದಕ್ಕೂ ಅಧಿಕ ಮಂದಿ ಶಸಸ್ತ್ರ ದರೋಡೆಕೋರು ಅಡ್ಡಗಟ್ಟಿದರು. ದರೋಡೆಕೋರರು ದಂಪತಿ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದರು. ಇದರಿಂದ ಗಂಭೀರ ಗಾಯಗೊಂಡ ಲಿಪ್ಸಿ ಮಿತ್ತಲ್ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಅನೋಖ್ ಮಿತ್ತಲ್ ಈ ದಾಳಿಯನ್ನು ತಡೆಯಲು ಯತ್ನಿಸಿದರು. ಇದರಿಂದ ಅವರಿಗೆ ಗಂಭೀರ ಗಾಯಗಳಾಗಿವೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದರೋಡೆಕೋರರು ಮಿತ್ತಲ್ನ ಕಾರು ಹಾಗೂ ಇತರ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.
ದಾಳಿಯ ಕುರಿತಂತೆ ತನಿಖೆ ಆರಂಭಿಸಲಾಗಿದೆ. ‘‘ನಾವು ಘಟನೆಯನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ದಾಳಿಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.