ಬಿಹಾರದಲ್ಲಿ ಮತ್ತೊಬ್ಬ ಉದ್ಯಮಿಯ ಗುಂಡಿಕ್ಕಿ ಹತ್ಯೆ
ಸಿಎಂ ಏಕೆ ಮೌನವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್

ಸಾಂದರ್ಭಿಕ ಚಿತ್ರ
ಪಟ್ನಾ: ಪಟ್ನಾದ ರಾಮಕೃಷ್ಣ ನಗರ ಪ್ರದೇಶದಲ್ಲಿ ಶುಕ್ರವಾರ ಸಂಜೆ ಮತ್ತೊಬ್ಬ ಉದ್ಯಮಿ ವಿಕ್ರಂ ಝಾರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಇದರ ಬೆನ್ನಿಗೇ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆಯ ಬೆನ್ನಿಗೇ ಈ ಘಟನೆ ನಡೆದಿದ್ದು, ಈ ಎರಡು ಹತ್ಯೆ ಪ್ರಕರಣಗಳಿಂದ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜ್ಯ ರಾಜಕಾರಣ ಬಿಸಿಬಿಸಿ ವಾಗ್ವಾದಕ್ಕೆ ಸಾಕ್ಷಿಯಾಗಿದೆ.
ಪೊಲೀಸರ ಪ್ರಕಾರ, ಈ ಘಟನೆ ಶುಕ್ರವಾರ ತಡ ಸಂಜೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಟ್ನಾ (ಪೂರ್ವ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿಚಯ್ ಕುಮಾರ್, “ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದರು ಹಾಗೂ ಉದ್ಯಮಿ ವಿಕ್ರಂ ಝಾರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಈ ಹತ್ಯಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ” ಎಂದು ತಿಳಿಸಿಸದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರಲು ಮುಖ್ಯಯಮಂತ್ರಿ ನಿತೀಶ್ ಕುಮಾರ್ ಅವರ ನಿಷ್ಕ್ರಿಯತೆ ಕಾರಣ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಉದ್ಯಮಿ ವಿಕ್ರಂ ಝಾರನ್ನು ಪಟ್ನಾದಲ್ಲಿ ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ! ರಾಜ್ಯದಲ್ಲಿನ ಇಂತಹ ಭಯಾನಕ ವಾತಾವರಣಕ್ಕೆ ಡಿಕೆ ತೆರಿಗೆ ವರ್ಗಾವಣೆ ಉದ್ಯಮ ಮುಖ್ಯ ಕಾರಣ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಪ್ರಜ್ಞಾಹೀನ ಮುಖ್ಯಾಮಂತ್ರಿಗಳೇಕೆ ಮೌನವಾಗಿದ್ದಾರೆ? ದಿನನಿತ್ಯ ನಡೆಯುತ್ತಿರುವ ನೂರಾರು ಹತ್ಯೆಗಳಿಗೆ ಯಾರು ಹೊಣೆ?” ಎಂದೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ 10 ದಿನಗಳ ಅವಧಿಯಲ್ಲಿ ಪಟ್ನಾದಲ್ಲಿ ನಡೆದಿರುವ ಮೂರನೆಯ ಉದ್ಯಮಿಯ ಹತ್ಯೆ ಇದಾಗಿದೆ. ಜುಲೈ 10ರಂದು 50 ವರ್ಷದ ಗಣಿ ಉದ್ಯಮಿಯನ್ನು ರಾಣಿತಾಲಾಬ್ ಪ್ರದೇಶದಲ್ಲಿನ ಅವರ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಇದಾದ ನಂತರ, ಜುಲೈ 4ರಂದು ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾರನ್ನೂ ಅವರ ನಿವಾಸದೆದುರೇ ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ಇದಾದ ಒಂದು ವಾರದ ಅಂತರದಲ್ಲೇ ಮತ್ತೊಬ್ಬ ಉದ್ಯಮಿ ವಿಕ್ರಂ ಝಾರ ಹತ್ಯೆಗೈಯ್ಯಲಾಗಿದೆ.







