ಮಧ್ಯಪ್ರದೇಶ: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಮರಿ ಸಾವು

File Photo (credit: timesnownews.com)
ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ತಿಂಗಳ ಮತ್ತೊಂದು ಚೀತಾ ಮರಿಯು ಮೃತಪಟ್ಟಿದೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆ ತರಲಾಗಿದ್ದ ಗಾಮಿನಿ ಎಂಬ ಹೆಸರಿನ ಚೀತಾಗೆ ಜನಿಸಿದ ಮರಿ ಇದಾಗಿತ್ತು ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಗಾಮಿನಿ ಆರು ಚೀತಾ ಮರಿಗಳಿಗೆ ಜನ್ಮ ನೀಡಿತ್ತು. ಇದರ ಬೆನ್ನಿಗೇ ಜೂನ್ ತಿಂಗಳಲ್ಲಿ ಅದರ ಮೊದಲ ಮರಿಯು ಮೃತಪಟ್ಟಿತ್ತು.
ಆಫ್ರಿಕಾದಿಂದ ಭಾರತಕ್ಕೆ 2023ರಿಂದ ಕರೆ ತರಲಾಗಿರುವ 20 ಚೀತಾಗಳ ಪೈಕಿ ಏಳು ಚೀತಾಗಳು ಹಾಗೂ ಅವಕ್ಕೆ ಜನಿಸಿದ್ದ ಐದು ಮರಿಗಳು ಇಲ್ಲಿಯವರೆಗೆ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮೃತಪಟ್ಟಿವೆ. ಈಗ ಈ ಉದ್ಯಾನವನದಲ್ಲಿ 13 ವಯಸ್ಕ ಚೀತಾಗಳು ಹಾಗೂ 12 ಚೀತಾ ಮರಿಗಳು ಜೀವಂತವಾಗಿ ಉಳಿದಿವೆ.
ಜುಲೈ 29ರಂದು ನಡೆದಿದ್ದ ದೈನಂದಿನ ನಿಗಾವಣೆಯ ಸಂದರ್ಭದಲ್ಲಿ ತನ್ನ ಸೊಂಟವನ್ನು ಮೇಲೆತ್ತಲಾಗದೆ ಐದು ತಿಂಗಳ ಚೀತಾ ಮರಿ ಮೃತಪಟ್ಟಿರುವುದು ಕಂಡು ಬಂದಿತ್ತು.





