ಹರ್ಯಾಣ | ಐಪಿಎಸ್ ಅಧಿಕಾರಿ ಆತ್ಮಹತ್ಯೆ ಬೆನ್ನಲ್ಲೆ ಮತ್ತೋರ್ವ ಪೊಲೀಸ್ ಅಧಿಕಾರಿಯ ಮೃತದೇಹ ಪತ್ತೆ

Screengrab:X/ANI
ರೋಹ್ಟಕ್ : ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ ಹರ್ಯಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೆ ರೋಹ್ಟಕ್ನಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿಯ ಮೃತದೇಹ ಪತ್ತೆಯಾಗಿದೆ.
ಮಂಗಳವಾರ ರೋಹ್ಟಕ್ನ ಲಾಧೋಟ್ ಗ್ರಾಮದ ಕೃಷಿ ಹೊಲದ ಬಳಿ ಕೊಠಡಿಯೊಂದರಲ್ಲಿ ಎಎಸ್ಐ ಸಂದೀಪ್ ಕುಮಾರ್ ಅವರ ಮೃತದೇಹ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಸಂದೀಪ್ ಕುಮಾರ್ ಸೈಬರ್ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಿಯೋಜನೆಗೊಂಡಿದ್ದರು. ಜಿಂದ್ ಜಿಲ್ಲೆಯ ಜುಲಾನಾ ನಿವಾಸಿಯಾಗಿರುವ ಎಎಸ್ಐ ಆತ್ಮಹತ್ಯೆಗೆ ಮೊದಲು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಇಲಾಖೆಯೊಳಗಿನ ಭ್ರಷ್ಟಾಚಾರ, ಜಾತಿ ತಾರತಮ್ಯ ಮತ್ತು ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ರೋಹ್ಟಕ್ ಎಸ್ಪಿ ಸುರೇಂದ್ರ ಸಿಂಗ್ ಭೋರಿಯಾ ಈ ಕುರಿತು ಪ್ರತಿಕ್ರಿಯಿಸಿ, ಸಂದೀಪ್ ಅವರು ಪ್ರಾಮಾಣಿಕ ಅಧಿಕಾರಿ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಅವರ ಆತ್ಮಹತ್ಯೆಯ ನಂತರ ಈ ಘಟನೆ ನಡೆದಿದೆ.





