ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾದರಿಯ ಮತ್ತೊಂದು ಬಾಟಲಿಯಲ್ಲಿ ಅಪಾಯಕಾರಿ ರಾಸಾಯನಿಕ ಹೆಚ್ಚಿನ ಪ್ರಮಾಣದಲ್ಲಿ ಪತ್ತೆ!

ಸಾಂದರ್ಭಿಕ ಚಿತ್ರ
ಭೋಪಾಲ್ : ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾದರಿಯ ಮತ್ತೊಂದು ಬಾಟಲಿಯಲ್ಲಿ ಡೈಥಿಲೀನ್ ಗ್ಲೈಕೋಲ್ (DEG) ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಮಧ್ಯಪ್ರದೇಶ ಔಷಧ ನಿಯಂತ್ರಣ ಪ್ರಾಧಿಕಾರ (MPFDA) ದೃಢಪಡಿಸಿದೆ.
ಸಿರಪ್ ಮಾದರಿಯನ್ನು ಜಿಲ್ಲಾ ಮಟ್ಟದ FDA ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇದೇ ಬ್ಯಾಚ್ನ ಹಿಂದಿನ ಮಾದರಿಯಲ್ಲಿಯೂ ಇದೇ ರೀತಿ ಅಪಾಯಕಾರಿ ರಾಸಾಯನಿಕದ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ MPFDA ಜಿಲ್ಲಾಧಿಕಾರಿಗಳಿಗೆ ಪತ್ರಗಳನ್ನು ರವಾನಿಸಿದೆ ಮತ್ತು ಡ್ರಗ್ ಇನ್ಸ್ ಪೆಕ್ಟರ್ಗಳಿಗೆ ಮೆಡಿಕಲ್ ಶಾಪ್ಗಳಲ್ಲಿ ಪರಿಶೀಲನೆ ನಡೆಸುವಂತೆ ಸೂಚಿಸಿದೆ.
ಮಧ್ಯಪ್ರದೇಶ ಸರಕಾರ ಈಗಾಗಲೇ ಕೋಲ್ಡ್ರಿಫ್, ರೆಸ್ಪಿಫ್ರೆಶ್ ಮತ್ತು ರಿಲೈಫ್ ಎಂಬ ಮೂರು ಕೆಮ್ಮಿನ ಸಿರಪ್ಗಳ ಮಾರಾಟವನ್ನು ನಿಷೇಧಿಸಿದೆ ಮತ್ತು ಮಾರುಕಟ್ಟೆಯಿಂದ ಹಿಂಪಡೆಯಲು ಸೂಚಿಸಿದೆ.
ಎಂಪಿಎಫ್ ಡಿಎ ಮಾಹಿತಿಯ ಪ್ರಕಾರ, ಚಿಂದ್ವಾರಾ ಜಿಲ್ಲೆಯಲ್ಲಿ 23 ಮಕ್ಕಳ ಪ್ರಾಣ ಹಾನಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್ ಆ ಪ್ರದೇಶದಲ್ಲೇ ವಿತರಿಸಲ್ಪಟ್ಟಿತ್ತು. ಒಟ್ಟು 660 ಬಾಟಲಿಗಳಲ್ಲಿ ಬಹುಪಾಲು ಬಾಟಲಿಗಳನ್ನು ಈಗಾಗಲೇ ವಾಪಸ್ಸು ಪಡೆಯಲಾಗಿದೆ.
ಇತರ ಎರಡು ಸಿರಪ್ಗಳಾದ ರೆಸ್ಪಿಫ್ರೆಶ್ (6,528 ಬಾಟಲಿಗಳು) ಮತ್ತು ರಿಲೈಫ್ (1,400 ಬಾಟಲಿಗಳು) ಗಳನ್ನು ಹೆಚ್ಚಾಗಿ ವಿತರಿಸಲಾಗಿದೆ. ರಾಜ್ಯದಲ್ಲಿ ಈ ಉತ್ಪನ್ನಗಳನ್ನು ಹಿಂಪಡೆಯುವಂತೆ ಡ್ರಗ್ ಇನ್ಸ್ ಪೆಕ್ಟರ್ಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ







