ಭುವನೇಶ್ವರ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವುದಾಗಿ ಖಾಲಿಸ್ತಾನಿ ಉಗ್ರ ಪನ್ನೂನಿಂದ ಮತ್ತೊಂದು ಬೆದರಿಕೆ
ಸಿಂಗ್ ಪನ್ನೂನ್ | PC : PTI
ಭುವನೇಶ್ವರ : ಭುವನೇಶ್ವರದಲ್ಲಿ 59ನೇ ಡಿಜಿ-ಐಜಿ ಸಮಾವೇಶ ನಡೆಯುತ್ತಿರುವಂತೆ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ ಸಿಂಗ್ ಪನ್ನೂನ್ ಬಿಜು ಪಟ್ನಾಯಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿರಿಸಿಕೊಂಡು ಮತ್ತೊಂದು ಬೆದರಿಕೆ ಒಡ್ಡಿದ್ದಾನೆ.
ಗುರುಪತ್ವಂತ್ ಸಿಂಗ್ ಪನ್ನೂನ್ ಇಮೇಲ್ ಮೂಲಕ ಭುವನೇಶ್ವರ ಮೂಲದ ಪತ್ರಕರ್ತರೋರ್ವರಿಗೆ ಈ ಬೆದರಿಕೆಯ ಆಡಿಯೊ ತುಣುಕನ್ನು ಕಳುಹಿಸಿ ಕೊಟ್ಟಿದ್ದಾನೆ. ಇದು ಮೂರು ದಿನಗಳಲ್ಲಿ ಆತ ಕಳುಹಿಸುತ್ತಿರುವ ಇಂತಹ ಎರಡನೇ ಸಂದೇಶ.
ಆದರೆ, ಒಡಿಯಾ ಭಾಷೆಯಲ್ಲಿ ಬರೆಯಲಾಗಿದೆ ಎಂದು ಹೇಳಲಾಗಿರುವುದರಿಂದ ಈ ಈಮೇಲ್ ಭದ್ರತಾ ಸಂಸ್ಥೆಗಳನ್ನು ಗೊಂದಲಕ್ಕೆ ಈಡು ಮಾಡಿದೆ. ಈ ಈಮೇಲ್ ನಲ್ಲಿ ಭುವನೇಶ್ವರದ ಬಿಜು ಪಟ್ನಾಯಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಡಿಸೆಂಬರ್ 1 ರಂದು ಪ್ರಯಾಣಿಸದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಪನ್ನೂನ್ ದೆಂದು ಹೇಳಲಾದ ಅಡಿಯೊ ತುಣುಕು ವೈರಲ್ ಆದ ಕೆಲವು ನಿಮಿಷಗಳ ಬಳಿಕ ಬಿಜು ಪಟ್ನಾಯಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಹೊರಗೆ ಸಂದೇಹಾಸ್ಪದ ಬ್ಯಾಗೊಂದು ಪತ್ತೆಯಾಗಿದೆ. ಕೇಂದ್ರ ಕೈಗಾರಿಕೆ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಕೂಡಲೇ ಧಾವಿಸಿದರು ಹಾಗೂ ಬ್ಯಾಗ್ ಅನ್ನು ಹೊರಗೊಯ್ದು ಕೂಲಂಕಷವಾಗಿ ತನಿಖೆ ನಡೆಸಿದರು.
ಆಡಿಯೊ ಸಂದೇಶ ಹರಿದಾಡಿದ ಬಳಿಕ ಒಡಿಶಾ ಪೊಲೀಸ್ನ ಸೈಬರ್ ತಜ್ಞರ ತಂಡ ಈಮೇಲ್ ಕಳುಹಿಸಿದವರ ವಿವರವನ್ನು ಪರಿಶೀಲಿಸಲು ನಗರದಲ್ಲಿರುವ ಪತ್ರಕರ್ತನ ಮನೆಗೆ ಭೇಟಿ ನೀಡಿತು.
‘‘ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲು ಸಂದೇಶ ರವಾನಿಸಿದವರ ಐಪಿ ವಿಳಾಸವನ್ನು ಪರಿಶೀಲಿಸಲಾಗುವುದು’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಆದರೆ, ಒಡಿಶಾದಲ್ಲಿ ಹಲವು ಪ್ರಸಿದ್ಧ ವ್ಯಕ್ತಿಗಳು ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮದ ನಡುವೆ ಆಂತಕವನ್ನು ಸೃಷ್ಟಿಸಲು ಹುಸಿ ಬಾಂಬ್ ಕರೆ ಮಾಡಿರುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.