ಸ್ವಯಂ ಘೋಷಿತ ಗೋರಕ್ಷಕ ಗೂಂಡಾಗಳ ಆಟಾಟೋಪಕ್ಕೆ ಮತ್ತೊಂದು ಬಲಿ
ರಾಜಸ್ಥಾನದ ಸಂದೀಪ್ ರನ್ನು ಅಮಾನುಷವಾಗಿ ಕೊಂದು ಎಸೆದ ಗೋರಕ್ಷಕ ಗೂಂಡಾಗಳು

ಗೋ ರಕ್ಷಣೆಯ ಹೆಸರಲ್ಲಿ ಶುರುವಾದ ಗೂಂಡಾ ಕಾರ್ಯಾಚರಣೆಗೆ ಹೆಚ್ಚು ಬಲಿಯಾಗುತ್ತಿದ್ದವರು
ಮುಸ್ಲಿಮ್ ವ್ಯಾಪಾರಿಗಳು. ಈಗ ಈ ಗೋರಕ್ಷಕರ ರಕ್ತದಾಹ ಮಿತಿಮೀರಿದೆ. ಅದೀಗ ಮುಸ್ಲಿಮರು ಹಿಂದೂಗಳು ಎಂದು ನೋಡದೆ ದಾಳಿ ಮಾಡುತ್ತಿದೆ.
ಈಗ ಗೋರಕ್ಷಕ ಗೂಂಡಾಗಳು ಹಿಂದೂಗಳನ್ನೂ ಬಲಿತೆಗೆದುಕೊಳ್ಳುತ್ತಿದ್ದಾರೆ. ಹರಿಯಾಣದಲ್ಲಿ ಗೋವಿನ ಹೆಸರಲ್ಲಿ ಮತ್ತೊಂದು ಹತ್ಯೆ ನಡೆದಿದೆ. ಗೋ ರಕ್ಷಕರ ಗೂಂಡಾಗಳ ಗುಂಪೊಂದು ಸಂದೀಪ್ ಹೆಸರಿನ ಯುವಕನನ್ನು ಕೊಲೆ ಮಾಡಿದೆ.
ರಾಜಸ್ಥಾನದ ಭವರ್ ಲಾಲ್ ಅವರ ಪುತ್ರ, 28 ವರ್ಷದ ಸಂದೀಪ್, ಹರಿಯಾಣದಲ್ಲಿ ಗೋ ರಕ್ಷಕರಿಂದ ಹತ್ಯೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಐವರು ಆರೋಪಿಗಳನ್ನು ಬಂಧಿಸಿದೆ. ಆದರೆ ಘಟನೆಗೆ ಕಾರಣವಾದ ಕೆಲವು ಪ್ರಮುಖ ಮಾಹಿತಿಗಳು ಇದೀಗ ಬಯಲಾಗಿವೆ. ಪಲ್ವಾಲ್ ಪ್ರದೇಶದಲ್ಲಿ ಗೋ ರಕ್ಷಕರ ಮತ್ತು ಪೊಲೀಸರ ನಡುವಿನ ನಂಟು , ರಾಜಕೀಯ ಪ್ರಭಾವ, ಮತ್ತು ಹಿಂದಿನ ವರ್ಷಗಳಲ್ಲಿ ನಡೆದ ಇದೇ ರೀತಿಯ ಹತ್ಯೆಗಳ ಮಾದರಿ ಕುರಿತಾಗಿ ಚರ್ಚೆ ನಡೆಯುತ್ತಿದೆ.
ಫೆಬ್ರವರಿ 22ರ ಮಧ್ಯರಾತ್ರಿ, ಸಂದೀಪ್ ಮತ್ತು ಅವರ ಸಹಚರ ಬಾಲ್ ಕಿಷನ್ ಅವರು ಉತ್ತರಪ್ರದೇಶದ ಲಖ್ನೋಗೆ ಎರಡು ಹಸುಗಳನ್ನು ಕೊಂಡೊಯ್ಯುತ್ತಿದ್ದರು. ಅವರ ಬಳಿ ಎಲ್ಲ ಕಾನೂನು ದಾಖಲೆಗಳು ಇದ್ದರೂ, ಪಲ್ವಾಲ್ ಸಮೀಪದ ಒಂದು ಪೊಲೀಸ್ ತಪಾಸಣಾ ಗೇಟಿನಲ್ಲಿ ಅವರನ್ನು ನಿಲ್ಲಿಸಲಾಯಿತು.
ಈ ಗೇಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು, ಇವರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಎಸ್ ಪಿ ಒ, ಸ್ಥಳೀಯ ಗೋ ರಕ್ಷಕರಿಗೆ ಕರೆ ಮಾಡಿ ಹಸುಗಳ ಸಾಗಣೆಯ ಬಗ್ಗೆ ಮಾಹಿತಿ ನೀಡಿದರು. ಈ ಕರೆ ನಂತರ, ಆರು ಜನ ಗೋ ರಕ್ಷಕರ ಗುಂಪು ಬೈಕ್ಗಳಲ್ಲಿ ಅಲ್ಲಿಗೆ ಬಂದರು. ಈ ಎಸ್ ಪಿ ಓ ಅಂದ್ರೆ ಇವರು ಪೂರ್ಣಾವಧಿ ಪೊಲೀಸ್ ಅಧಿಕಾರಿಗಳಲ್ಲ, ಕೆಲವು ನಿರ್ದಿಷ್ಟ ಕೆಲಸಗಳಲ್ಲಿ ಪೊಲೀಸರಿಗೆ ಸಹಕರಿಸಲು ನೇಮಕವಾಗುವ ನಾಗರೀಕರು.
ಗೋ ರಕ್ಷಕರು ಮೊದಲು ಸಂದೀಪ್ ಮತ್ತು ಬಾಲ್ ಕಿಷನ್ ಅವರ ವಾಹನವನ್ನು ಫಾಲೋ ಮಾಡಿ ನಂತರ ರಾಡ್ ಗಳು ಮತ್ತು ತಲವಾರುಗಳಂತಹ ಶಸ್ತ್ರಾಸ್ತ್ರಗಳಿಂದ ಹಲ್ಲೆ ಮಾಡಿದರು. ಇದು ಗೋ ಸಂರಕ್ಷಣೆ ಅಲ್ಲ, ನೇರವಾಗಿ ನರಹತ್ಯೆ,” ಎಂದು ರಾಜಸ್ಥಾನದ ಕೇಸರಿ ಸಿಂಗ್ಪುರ ಗ್ರಾಮದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಗೋರಕ್ಷಕ ಗೂಂಡಾಗಳ ತಂಡ ಸಂದೀಪ್ ಮತ್ತು ಬಾಲ್ಕಿಷನ್ ಅವರನ್ನು ಹಳೇ ಕಾಲುವೆ ಹತ್ತಿರ ಕರೆದೊಯ್ದು ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದೆ. ಅವರಿಗೆ ತಲವಾರು ಮತ್ತು ಕಲ್ಲುಗಳಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಅವರ ಸಾವಿನ ಬಗ್ಗೆ ಖಚಿತಪಡಿಸಿಕೊಂಡ ನಂತರ, ಅವರ ಶವವನ್ನು 17 ಕಿಮೀ ದೂರದಲ್ಲಿರುವ ಸೋಹ್ನಾ ಹತ್ತಿರದ ಹೂಳಿ ಕಾಲುವೆಗೆ ಎಸೆದರು.
ಆದರೆ ಬಾಲ್ಕಿಷನ್ ಬದುಕುಳಿದಿದ್ದರು. ತೀವ್ರ ಗಾಯಗೊಂಡಿದ್ದರೂ, ಅವರು ಕಾಲುವೆಯಲ್ಲಿ ಈಜಿ ಕಾಲುವೆಯಿಂದ ಹೊರಬಂದು ಪಲ್ವಾಲ್ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ತಡವಾಗಿ ಕ್ರಮ ಕೈಗೊಂಡಿದ್ದೂ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಫೆಬ್ರವರಿ 23ರಂದು ಬಾಲ್ಕಿಷನ್ ಅವರ ಮಾಹಿತಿ ಆಧರಿಸಿ ಎಫ್ಐಆರ್ ದಾಖಲಿಸಲಾಯಿತು. ಆದರೆ ಸಂದೀಪ್ ಅವರ ಶವ ಪತ್ತೆಯಾಗಲು 10 ದಿನಗಳ ಕಾಲ ಹುಡುಕಾಟ ನಡೆಯಿತು. ಈ ಶವವನ್ನು ಪತ್ತೆ ಹಚ್ಚಲು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (NDRF) ಸಹ ಸೇರಿ ಶೋಧಕಾರ್ಯ ನಡೆಸಿತು. ಕೊನೆಗೆ ಮಾರ್ಚ್ 2 ರಂದು, ಅವರ ಶವ ಘಟನಾಸ್ಥಳದಿಂದ 15 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ಪತ್ತೆಯಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತರ ಪೈಕಿ ಕೆಲವರು ಹಿಂದಿನ ಹತ್ಯೆ ಪ್ರಕರಣಗಳಿಗೂ ಸಂಬಂಧ ಹೊಂದಿರುವ ಶಂಕೆ ಇದೆ. ಪೊಲೀಸರು ಜತೆಗಾರರ ಮೊಬೈಲ್ ಕರೆ ವಿವರಗಳನ್ನು (CDR) ಬಳಸಿಕೊಂಡು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ಹರಿಯಾಣದಲ್ಲಿ ಈ ರೀತಿಯ ಪ್ರಕರಣಗಳು ಹೊಸದೇನಲ್ಲ.
ಫೆಬ್ರವರಿ 2023: ರಾಜಸ್ಥಾನದ ನಾಸಿರ್ ಮತ್ತು ಜುನೈದ್ ಅವರನ್ನು ಗೋ ರಕ್ಷಕರ ಗುಂಪು ಅಪಹರಿಸಿ, ನಂತರ ಅವರ ದೇಹಗಳನ್ನು ಭಿವಾನಿ ಜಿಲ್ಲೆಯಲ್ಲಿ ಬರ್ಬರ ರೀತಿಯಲ್ಲಿ ಸುಟ್ಟು ಹಾಕಿತ್ತು. ಆ ಪ್ರಕರಣದಲ್ಲಿ ಹರ್ಯಾಣ ಪೊಲೀಸರ ಜೊತೆ ಪೊಲೀಸ್ ಅಧಿಕಾರಿಯಾಗಿಯೇ ಸುತ್ತಾಡುವ ಗೋ ರಕ್ಷಕ ಗೂಂಡಾ ಮೋನು ಮನೇಸರ್ ಮುಖ್ಯ ಆರೋಪಿಯಾಗಿದ್ದ.
ಆಗಸ್ಟ್ 2024: ಪಶ್ಚಿಮ ಬಂಗಾಳದ 25 ವರ್ಷದ ರದ್ದಿಪಟ್ಟಕ ಸಂಗ್ರಾಹಕ ಸಾಬೀರ್ ಮಲಿಕ್ ನನ್ನು ಗೋ ಮಾಂಸ ತಿಂದಿದ್ದಾನೆ ಎಂಬ ಆರೋಪದ ಮೇಲೆ ಹೊಡೆದು ಕೊಲ್ಲಲಾಯಿತು.
ಆಗಸ್ಟ್ 2024: ಫರೀದಾಬಾದ್ನಲ್ಲಿ 19 ವರ್ಷದ ಆರ್ಯನ್ ಮಿಶ್ರಾ ಎಂಬ ಯುವಕನನ್ನು ಮುಸ್ಲಿಂ ಜಾನುವಾರು ಸಾಗಾಟಗಾರ ಎಂದು ಭಾವಿಸಿ ಹತ್ಯೆ ಮಾಡಲಾಯಿತು.
ಈ ಹಿಂದಿನ ಘಟನೆಗಳ ಹಿನ್ನಲೆಯಲ್ಲಿ, ಈ ಬಾರಿ ಹತ್ಯೆಯಾದವರು ಹಿಂದೂ ಸಮುದಾಯದವರಾಗಿರುವುದು ಹೊಸ ವಿವಾದವನ್ನು ಸೃಷ್ಟಿಸಿದೆ.
ಈ ಪ್ರಕರಣವು ಪೊಲೀಸರು ಮತ್ತು ಗೋ ರಕ್ಷಕರ ನಡುವಿನ ನಂಟನ್ನು ಬಹಿರಂಗಗೊಳಿಸಿದೆ. ಹರಿಯಾಣದಲ್ಲಿ 2015 ರಲ್ಲಿ ಗೋ ಹತ್ಯೆ ನಿಷೇದ ಜಾರಿಗೆ ಬಂದ ನಂತರ, ಪೊಲೀಸ್ ಇಲಾಖೆಯು ಕೆಲವು ಗೋ ರಕ್ಷಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ.
ಪೊಲೀಸರು ನಿಯಮಿತವಾಗಿ ಗೋ ಸಾಗಣೆ ಕುರಿತ ಮಾಹಿತಿ ಗೋ ರಕ್ಷಕರಿಗೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
DSP ಮನುಜ್ ವರ್ಮಾ ಅವರ ಪ್ರಕಾರ, "ನೈಜ ಗೋ ರಕ್ಷಕರು ಸದಾಚಾರ ಮತ್ತು ಪರಂಪರೆಯ ಹೆಸರಿನಲ್ಲಿ ತಂತ್ರಬದ್ಧವಾಗಿ ಕೆಲಸ ಮಾಡುತ್ತಾರೆ. ಆದರೆ, ಕೆಲವು ಗುಂಪುಗಳು ಇಂತಹ ಅಮಾನವೀಯ ಕ್ರಿಯೆಗಳಲ್ಲಿ ತೊಡಗಿವೆ."
ಸಂದೀಪ್ ಅವರ ಕುಟುಂಬ ನೋವಿನಲ್ಲಿದೆ. ಅವರ ತಂದೆ ಭವರ್ ಲಾಲ್, "ಇದು ಕೇವಲ ಗೋಹತ್ಯೆ ತಡೆಯಲು ಮಾಡಲಾದ ಕಾರ್ಯವಲ್ಲ. ಇದು ಸರಿಯಾದ ನ್ಯಾಯವಲ್ಲ. ನನ್ನ ಮಗ ಕೇವಲ ಪೇಂಟರ್, ಅವನು ಈ ಹಿಂಸಾಚಾರಕ್ಕೆ ಬಲಿಯಾಗಬೇಕಾಗಿರಲಿಲ್ಲ." ಎಂದು ಹೇಳಿದ್ದಾರೆ.
ಸಂದೀಪ್ ಅವರ ಮದುವೆ ಮೇ ಅಥವಾ ಜೂನ್ ತಿಂಗಳಲ್ಲಿ ನಡೆಯಬೇಕಾಗಿತ್ತು. ಆದರೆ, ಈ ಅಮಾನವೀಯ ಹತ್ಯೆಯು ಅವರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಿಸಿದೆ.
ಬಜರಂಗ ದಳದ ಹರಿಯಾಣ ರಾಜ್ಯ ಸಂಚಾಲಕ ಭರತ್ ಭೂಷಣ್, "ಇಂತಹ ಜನರು ನೈಜ ಗೋ ರಕ್ಷಕರು ಅಲ್ಲ. ಅವರು ನಮ್ಮ ಹೆಸರು ಕೆಡಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ಈಗ ಗೋರಕ್ಷಕರು ನಮ್ಮ ಹೆಸರು ಕೆಡಿಸುತ್ತಿದ್ದಾರೆ ಎಂದು ಬಜರಂಗದಳದಂತಹ ಗೂಂಡಾ ಸಂಘಟನೆಯೇ ಹೇಳುತ್ತಿದೆ ಅಂದರೆ ಇದಕ್ಕಿಂತ ದೊಡ್ಡ ವಿಪರ್ಯಾಸ ಏನಿದೆ ?
ಈ ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ನಡೆಸುವಂತೆ ಹಲವರು ಒತ್ತಾಯಿಸಿದ್ದಾರೆ. ಈಗಾಗಲೇ ಹಲವಾರು ಸಂಘಟನೆಗಳು ಪಲ್ವಾಲ್ ಮತ್ತು ಹರಿಯಾಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಭವರ್ ಲಾಲ್ ಮತ್ತು ಅವರ ಕುಟುಂಬ ನ್ಯಾಯಕ್ಕಾಗಿ ಕಾಯುತ್ತಿದೆ.