"ಸಾರ್ವಜನಿಕರ ಹಣವನ್ನು ಏಕೆ ಖರ್ಚು ಮಾಡಬೇಕು?": 7 ಐಷಾರಾಮಿ ಬಿಎಂಡಬ್ಲ್ಯೂ ಕಾರುಗಳಿಗೆ ಟೆಂಡರ್ ಕರೆದ ಬೆನ್ನಲ್ಲೆ ಲೋಕಪಾಲ್ಗೆ ಕಾಂಗ್ರೆಸ್ ಪ್ರಶ್ನೆ

Photo credit: lokpal.gov.in
ಹೊಸದಿಲ್ಲಿ : ಭಾರತದ ಉನ್ನತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕಪಾಲ್ ತಲಾ 70 ಲಕ್ಷ ರೂ. ಮೌಲ್ಯದ ಏಳು ಐಷಾರಾಮಿ ಬಿಎಂಡಬ್ಲ್ಯೂ ಕಾರು ಖರೀದಿಗೆ ಟೆಂಡರ್ ಆಹ್ವಾನಿಸಿರುವ ಬೆನ್ನಲ್ಲೆ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಹಾಗೂ ಅಭಿಷೇಕ್ ಸಿಂಘ್ವಿ ಲೋಕಪಾಲ್ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಾಧಾರಣ ಸೆಡಾನ್(sedan) ಕಾರುಗಳನ್ನು ನೀಡುವಾಗ ಲೋಕಪಾಲ್ ಅಧ್ಯಕ್ಷರು ಮತ್ತು ಅದರ ಆರು ಮಂದಿ ಸದಸ್ಯರು ಬಿಎಂಡಬ್ಲ್ಯು ಕಾರು ಬೇಕೆಂದು ಏಕೆ ಬಯಸುತ್ತಾರೆ? ಎಂದು ಮಾಜಿ ಗೃಹ ಸಚಿವ ಚಿದಂಬರಂ ಪ್ರಶ್ನಿಸಿದ್ದಾರೆ.
"ಈ ಕಾರುಗಳನ್ನು ಖರೀದಿಸಲು ಸಾರ್ವಜನಿಕ ಹಣವನ್ನು ಏಕೆ ಖರ್ಚು ಮಾಡಬೇಕು? ಲೋಕಪಾಲದ ಕನಿಷ್ಠ ಒಬ್ಬರು ಅಥವಾ ಇಬ್ಬರು ಸದಸ್ಯರು ಈ ಕಾರುಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಅಥವಾ ನಿರಾಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಎಕ್ಸ್ ನಲ್ಲಿನ ಪೋಸ್ಟ್ನಲ್ಲಿ ಚಿದಂಬರಂ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಭಿಷೇಕ್ ಸಿಂಘ್ವಿ, ಲೋಕಪಾಲ್ ಕುರಿತ ಸಂಸದೀಯ ಸಮಿತಿಯ ಅಧ್ಯಕ್ಷತೆಯನ್ನು ನಾನು ವಹಿಸಿದ್ದೆ. ಡಾ.ಎಲ್.ಎಂ.ಸಿಂಘ್ವಿ ಅವರು ಮೊದಲು ಲೋಕಪಾಲ್ ಕಲ್ಪನೆಯನ್ನು 1960ರ ದಶಕದ ಆರಂಭದಲ್ಲಿ ಕಲ್ಪಿಸಿಕೊಂಡರು. ಈಗ ಈ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಸದಸ್ಯರಿಗಾಗಿ ಬಿಎಂಡಬ್ಲ್ಯೂ ಕಾರು ಖರೀದಿಸುವುದು ದುರಂತ ವ್ಯಂಗ್ಯವಾಗಿದೆ ಎಂದು ಹೇಳಿದರು.







