1984ರ ಸಿಖ್ಖ್ ವಿರೋಧಿ ಗಲಭೆ | ಮಾಜಿ ಎಂಪಿ ಸಜ್ಜನ್ ಕುಮಾರ್ ವಿರುದ್ಧದ ಕೊಲೆ ಪ್ರಕರಣ: ಫೆ.12ಕ್ಕೆ ತೀರ್ಪು ಮುಂದೂಡಿಕೆ

ಸಜ್ಜನ್ ಕುಮಾರ್ | PC : PTI
ಹೊಸದಿಲ್ಲಿ : 1984ರ ಸಿಖ್ಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ವಿರುದ್ಧದ ಕೊಲೆ ಪ್ರಕರಣದ ಕುರಿತಾದ ತನ್ನ ತೀರ್ಪನ್ನು ದಿಲ್ಲಿ ನ್ಯಾಯಾಲಯವು ಫೆಬ್ರವರಿ 12ಕ್ಕೆ ಮುಂದೂಡಿದೆ.
ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಶುಕ್ರವಾರ ತೀರ್ಪನ್ನು ಪ್ರಕಟಿಸುವುದಾಗಿ ನಿಗದಿಯಾಗಿತ್ತು. ಆದರೆ ಇಂದು ಅದನ್ನು ಮುಂದೂಡಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದ ನಿರ್ದಿಷ್ಟ ಅಂಶಗಳ ಬಗ್ಗೆ ವಾದಗಳನ್ನು ಮಂಡಿಸಲು ಕಾಲಾವಕಾಶ ನೀಡುವಂತೆ ಪ್ರಾಸಿಕ್ಯೂಶನ್ ಜನವರಿಯಲ್ಲಿ ಕೋರಿದಾಗ, ನ್ಯಾಯಾಲಯವು ಸಮ್ಮತಿಸಿ ತೀರ್ಪನ್ನು ಫೆ.7ಕ್ಕೆ ಮುಂದೂಡಿತ್ತು. ಆದರೆ ಇಂದು ತೀರ್ಪು ಮತ್ತೆ ಮುಂದೂಡಲ್ಪಟ್ಟಿದೆ.
1984ರ ದಿಲ್ಲಿ ಸಿಖ್ಖ್ ಗಲಭೆ ಸಂದರ್ಭ ನವೆಂಬರ್ 1ರಂದು ಸರಸ್ವತಿ ವಿಹಾರ್ನಲ್ಲಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್ ದೀಪ್ ಸಿಂಗ್ನ ಹತ್ಯೆಗೆ ಸಂಬಂಧಿಸಿ ಪ್ರಕರಣದ ಅಂತಿಮ ವಾದಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯವನ್ನು ತನ್ನು ತೀರ್ಪನ್ನು ಕಾಯ್ದಿರಿಸಿತು.
ಈ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದಿರಂದ ಅವರ ವಿರುದ್ಧ ನ್ಯಾಯಾಲಯವು 2021ರ ಡಿಸೆಂಬರ್ 16ರಂದು ದೋಷಾರೋಪಗಳನ್ನು ದಾಖಲಿಸಿತ್ತು.





