ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ನಿರೀಕ್ಷಣಾ ಜಾಮೀನು ನೀಡಬೇಕು: ದಿಲ್ಲಿ ಹೈಕೋರ್ಟ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಅಧಿಕಾರವು ಅಸಾಧಾರಣ ಅಧಿಕಾರವಾಗಿದೆ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಅದನ್ನು ಚಲಾಯಿಸಬೇಕು ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ.
ಆಸ್ತಿ ವಿವಾದದ ವಿಷಯದಲ್ಲಿ ತನ್ನ ಸೋದರ ಸಂಬಂಧಿಯ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಎದುರಿಸುತ್ತಿರುವ ಆಶಿಷ್ ಕುಮಾರ ಎಂಬವರಿಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದ ಸಂದರ್ಭದಲ್ಲಿ ನ್ಯಾ.ರವೀಂದ್ರ ಡುಡೇಜಾ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಾನೂನನ್ನು ಪಾಲಿಸುವವರಿಗೆ ಮಾತ್ರ ಕಾನೂನು ನೆರವಾಗುತ್ತದೆ ಎಂದು ಅವರು ತನ್ನ ಜು.1ರ ಆದೇಶದಲ್ಲಿ ಒತ್ತಿ ಹೇಳಿದ್ದಾರೆ.
ಕಸ್ಟಡಿ ವಿಚಾರಣೆಗಾಗಿ ಮತ್ತು ಅಪರಾಧ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲು ಆರೋಪಿಯ ಅಗತ್ಯವಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ದೂರುದಾರರ ಕುಟುಂಬ ಮತ್ತು ಕುಮಾರ ನಡುವಿನ ಹಿಂದಿನ ಆಸ್ತಿ ವಿವಾದದಿಂದಾಗಿ ಅವರನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ ಎಂದು ಹೇಳಿರುವ ಅರ್ಜಿಯು,ಕುಮಾರ ತನಿಖೆಗೆ ಹಾಜರಾಗಿರಲಿಲ್ಲ ಮತ್ತು ಅವರ ವಿರುದ್ಧ ಜಾಮೀನು ರಹಿತ ವಾರಂಟ್ಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದೆ.
ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ದೂರುದಾರರು ಗಾಯಗೊಂಡಿದ್ದಾರೆ ಎಂದು ಹೇಳಿರುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾ.ಡುಡೇಜಾ, ನಿಸ್ಸಂದೇಹವಾಗಿ ಗಾಯಾಳುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಮತ್ತು ಗಾಯಗಳು ಸರಳ ಸ್ವರೂಪದ್ದಾಗಿವೆ ಎಂದು ಹೇಳಲಾಗಿದೆ,ಆದರೆ ಅಪರಾಧ ಕೃತ್ಯದಲ್ಲಿ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲು ಆರೋಪಿಯ ಕಸ್ಟಡಿ ವಿಚಾರಣೆ ಅಗತ್ಯವಾಗಿದೆ. ಕಾನೂನನ್ನು ಪಾಲಿಸುವವರಿಗೆ ಮಾತ್ರ ಕಾನೂನು ನೆರವಾಗುತ್ತದೆ ಎಂದು ಹೇಳಿದರು.
ಘಟನೆಗೆ ದೂರುದಾರರ ಪ್ರಚೋದನೆಯು ಕಾರಣವಾಗಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದ್ದು,ದೂರುದಾರರು ಯಾವುದೇ ಅನುಮತಿಯಿಲ್ಲದೆ ವಿವಾದಿತ ಆಸ್ತಿಯಲ್ಲಿ ಅಡುಗೆಮನೆಯನ್ನು ನಿರ್ಮಿಸುತ್ತಿದ್ದನ್ನು ಅರ್ಜಿದಾರರು ಆಕ್ಷೇಪಿಸಿದ್ದರು ಮತ್ತು ದೂರುದಾರರು ಅರ್ಜಿದಾರರ ಸೋದರನ ಮೇಲೆ ಹಲ್ಲೆ ನಡೆಸಿದ್ದರು ಎಂದು ವಾದಿಸಲಾಗಿದೆ.
ಘಟನೆಯಲ್ಲಿ ಅರ್ಜಿದಾರರು ಮತ್ತು ಅವರ ತಾಯಿ ಗಾಯಗೊಂಡಿದ್ದರೂ ದೂರುದಾರರ ವಿರುದ್ಧ ಯಾವುದೇ ಪ್ರತಿದೂರನ್ನು ದಾಖಲಿಸಿಕೊಂಡಿಲ್ಲ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.