ಮಾಜಿ ಸಚಿವ ಅನುರಾಗ್ ಠಾಕೂರ್ ನಾಮಪತ್ರ ತಿರಸ್ಕರಿಸಿದ ಭಾರತದ ಬಾಕ್ಸಿಂಗ್ ಒಕ್ಕೂಟ

ಅನುರಾಗ್ ಠಾಕೂರ್ | PC: PTI
ಶಿಮ್ಲಾ: ಇದೇ ತಿಂಗಳ 28ರಂದು ಚುನಾವಣೆಗೆ ಅಂತಿಮಗೊಳಿಸಲಾದ ಎಲೆಕ್ಟೋರಲ್ ಕಾಲೇಜ್ನಲ್ಲಿ ಸೇರ್ಪಡೆಗಾಗಿ ಅನುರಾಗ್ ಠಾಕೂರ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಭಾರತದ ಬಾಕ್ಸಿಂಗ್ ಒಕ್ಕೂಟ(ಬಿಎಫ್ಐ)ಬುಧವಾರ ತಿರಸ್ಕರಿಸಿದೆ.
ಮಾಜಿ ಸಚಿವ ಠಾಕೂರ್ ಅವರು ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸಲು ಅರ್ಹರಲ್ಲ ಎಂದು ಬಿಎಫ್ಐ ತಿಳಿಸಿದೆ.
ಹಿಮಾಚಲಪ್ರದೇಶ ಬಾಕ್ಸಿಂಗ್ ಸಂಸ್ಥೆಯು ಠಾಕೂರ್ ಹಾಗೂ ಉಪಾಧ್ಯಕ್ಷ ರಾಜೇಶ್ ಭಂಡಾರಿ ಅವರ ಹೆಸರುಗಳನ್ನು ಕಳುಹಿಸಿತ್ತು. ಬಿಎಫ್ಐ 60 ಸದಸ್ಯರ ಎಲೆಕ್ಟೋರಲ್ ಕಾಲೇಜನ್ನು ಪ್ರಕಟಿಸಿದ್ದು, ಅದನ್ನು ಪರಿಶೀಲನೆಯ ನಂತರ ಅಂತಿಮಗೊಳಿಸಲಾಯಿತು.
ಅನುರಾಗ್ ಸಿಂಗ್ ಠಾಕೂರ್ರ ರಾಜ್ಯ ಘಟಕ-ಹಿಮಾಚಲಪ್ರದೇಶ ಬಾಕ್ಸಿಂಗ್ ಅಸೋಸಿಯೇಶನ್ ಅವರ ಹೆಸರನ್ನು ಕಳುಹಿಸಿತ್ತು. ಠಾಕೂರ್ 2025ರ ಮಾರ್ಚ್ 7ರಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ನೋಟಿಸ್ ಹಾಗೂ ಭಾರತದ ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ಸಂಹಿತೆ, 2011ರ ಉಲ್ಲಂಘನೆಗಾಗಿ ಅನರ್ಹರು ಎಂದು ಕಂಡುಬಂದಿದೆ ಎಂದು ಬಿಎಫ್ಐ ತನ್ನ ನಿರ್ಧಾರವನ್ನು ವಿವರಿಸುತ್ತಾ ತಿಳಿಸಿದೆ.
ಠಾಕೂರ್ ಅವರು ಹಿಮಾಚಲಪ್ರದೇಶ ರಾಜ್ಯ ಸಂಸ್ಥೆಯ ಚುನಾಯಿತ ಸದಸ್ಯರಲ್ಲ, ಅದಕ್ಕಾಗಿಯೇ ಅವರ ಹೆಸರನ್ನು ತಿರಸ್ಕರಿಸಲಾಗಿದೆ. ಎಲ್ಲ ಹೆಸರುಗಳನ್ನು ಪರಿಶೀಲಿಸುವುದು ಹಾಗೂ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಅಧಿಕಾರಿಗೆ ಕಳುಹಿಸುವುದು ಬಿಎಫ್ಐನ ಕೆಲಸ ಎಂದು ಬಿಎಫ್ಐ ಮೂಲವೊಂದು ತಿಳಿಸಿದೆ.
‘‘ಅನುರಾಗ್ ಠಾಕೂರ್ ಚುನಾಯಿತ ಸದಸ್ಯರು. ಅವರು ಕಳೆದ ಕೆಲವು ವರ್ಷಗಳಿಂದ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸದಸ್ಯರಾಗಿದ್ದಾರೆ. ಆದರೆ ಈಗ ಅವರು ಚುನಾವಣಾ ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಮ್ಮಲ್ಲಿ ಎಲ್ಲ ದಾಖಲೆಗಳಿವೆ’’ಎಂದು ವಿಎಚ್ಪಿಎ ಕಾರ್ಯದರ್ಶಿ ಸುರೇಂದರ್ ಕುಮಾರ್ ಶಾಂಡಿಲ್ ಪಿಟಿಐಗೆ ತಿಳಿಸಿದರು.