ಭಾರತ ಹಿಂದೂ ರಾಷ್ಟ್ರ, ಧನ್ವಂತರಿ ಚಿತ್ರ ಇಷ್ಟ ಇಲ್ಲದವರು ಪಾಕಿಸ್ತಾನಕ್ಕೆ ಹೋಗಬೇಕು: ಸಿಟಿ ರವಿ
ಸಿಟಿ ರವಿ
ಹೊಸದಿಲ್ಲಿ: ಭಾರತ ಹಿಂದೂ ರಾಷ್ಟ್ರ, ಧನ್ವಂತರಿ ಚಿತ್ರ ಇಷ್ಟ ಇಲ್ಲದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಹೇಳಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ತನ್ನ ಲೋಗೋವನ್ನು ಮಾರ್ಪಡಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಎನ್ಎಂಸಿ ಲೋಗೋದಲ್ಲಿ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟು, ಪುರಾಣಗಳಲ್ಲಿ ಆಯುರ್ವೇದದ ಹರಿಕಾರ ಎಂದು ಕರೆಯಲ್ಪಡುವ ವಿಷ್ಣುವಿನ ಅವತಾರವಾದ ಧನ್ವಂತ್ರಿಯ ಫೋಟೋವನ್ನು ಅಳವಡಿಸಲಾಗಿದೆ. ಇದು ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.
“ಭಾರತವು ಹಿಂದೂ ರಾಷ್ಟ್ರವಲ್ಲ, ಭಾರತವು ಜಾತ್ಯತೀತ ಸಂವಿಧಾನದಿಂದ ಆಡಳಿತ ನಡೆಸುತ್ತಿರುವ ದೇಶವಾಗಿದ್ದು, ಎಲ್ಲ ಧರ್ಮಗಳೂ ಸಮಾನ. ಭಾರತದ ರಾಜ್ಯಕ್ಕೆ ಯಾವುದೇ ಧರ್ಮವಿಲ್ಲ” ಎಂದು ಪತ್ರಕರ್ತೆ ಅರ್ಫಾ ಖಾನುಮ್ ಶೆರ್ವಾನಿ ಅವರು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಅವರು ಪ್ರತಿಕ್ರಿಯಿಸಿದ್ದು, “ಧನ್ವಂತರಿಯ ಚಿತ್ರದ ಬಗ್ಗೆ ಯಾರಿಗಾದರೂ ಸಮಸ್ಯೆ ಇದ್ದರೆ ಭಾರತವನ್ನು ತೊರೆದು ತಮ್ಮ ಪ್ರೀತಿಯ ಪಾಕಿಸ್ತಾನಕ್ಕೆ ಹೋಗಬೇಕು. ಭಾರತ ಹಿಂದೂ ದೇಶವಲ್ಲ ಎಂದು ಜಿಹಾದಿಗಳು ಏಕೆ ಕೂಗುತ್ತಿದ್ದಾರೆ? ಅವರ ಪೂರ್ವಜರು ಯಾರು? ಭಾರತ ಯಾವಾಗಲೂ ಹಿಂದೂ ರಾಷ್ಟ್ರವಾಗಿತ್ತು, ಹಾಗೂ ಶಾಶ್ವತವಾಗಿ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ. ಹಂದಿಗಳು ಅಳುತ್ತಲೇ ಇರಲಿ” ಎಂದು ಟ್ವೀಟ್ ಮಾಡಿದ್ದಾರೆ.
ಎನ್ಎಂಸಿ ಲೋಗೋದಲ್ಲಿ ಇಂಡಿಯಾ ಬದಲು 'ಭಾರತ್' ಎಂದು ಬಳಕೆ ಮಾಡಿರುವುದು ಕೂಡಾ ಚರ್ಚೆಗೆ ಗ್ರಾಸವಾಗಿದೆ.
ಲೋಗೋ ಬದಲಾವಣೆಯನ್ನು ಭಾರತೀಯ ವೈದ್ಯಕೀಯ ಸಂಘದ ಕೇರಳ ವಿಭಾಗವು ಟೀಕಿಸಿದೆ. "ಎನ್ಎಂಸಿ ಲೋಗೋದಲ್ಲಿನ ಇತ್ತೀಚಿನ ಬದಲಾವಣೆಯು ಆಧುನಿಕ ವೈದ್ಯಕೀಯ ಭ್ರಾತೃತ್ವಕ್ಕೆ ಸ್ವೀಕಾರಾರ್ಹವಲ್ಲ. ಹೊಸ ಲೋಗೋ ತಪ್ಪು ಸಂದೇಶವನ್ನು ನೀಡುತ್ತದೆ ಮತ್ತು ಆಯೋಗದ ವೈಜ್ಞಾನಿಕ ಮತ್ತು ಜಾತ್ಯತೀತ ಸ್ವರೂಪಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಈ ಕ್ರಮವನ್ನು ರದ್ದುಗೊಳಿಸಬೇಕು" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.