ಬಡ ಕುಟುಂಬಗಳಿಗೆ ಸರಕಾರ ತಕ್ಷಣ ಪುನರ್ವಸತಿ ಕಲ್ಪಿಸಬೇಕು : ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್

ಕೋಝಿಕೋಡ್ : ಬೆಂಗಳೂರಿನ ಯಲಹಂಕ ಸಮೀಪದ ಬಂಡೆ ರಸ್ತೆಯ ಫಕೀರ್ ಲೇಔಟ್ ಹಾಗೂ ವಾಸಿಮ್ ಲೇಔಟ್ ಕಾಲೋನಿಗಳಲ್ಲಿ ಮನೆಗಳ ತೆರವು ಕಾರ್ಯಾಚರಣೆ ಮಾನವೀಯತೆಗೆ ವಿರುದ್ಧವಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು ಇನ್ನೂರು ಮನೆಗಳನ್ನು ಬುಲ್ಡೋಝರ್ ಮೂಲಕ ನೆಲಸಮಗೊಳಿಸಿರುವುದು ನೋವುಂಟುಮಾಡಿದೆ. ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಹಾಗೂ ದಲಿತ ಸಮುದಾಯಗಳು ವಾಸಿಸುವ ಪ್ರದೇಶಗಳಿಂದ ಜನರನ್ನು ಕೊರೆಯುವ ಚಳಿಯ ನಡುವೆ ಸ್ಥಳಾಂತರಿಸಿರುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಮಾನವನ ಮೂಲಭೂತ ಅಗತ್ಯಗಳಲ್ಲಿ ವಸತಿ ಪ್ರಮುಖವಾದದ್ದು. ಅದನ್ನು ಖಚಿತಪಡಿಸಬೇಕಾದ ಸರಕಾರವೇ ಮನೆಗಳನ್ನು ಕೆಡವುತ್ತಿರುವುದು ಅಸಮರ್ಥನೀಯ ಕ್ರಮ. ಭೂಸ್ವಾಧೀನ ಅಥವಾ ತೆರವು ಕಾರ್ಯಾಚರಣೆ ಕೈಗೊಳ್ಳುವ ಮುನ್ನ ಸಮರ್ಪಕ ಸಮಯ, ನ್ಯಾಯಸಮ್ಮತ ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆಗಳನ್ನು ರೂಪಿಸಬೇಕಿತ್ತು ಎಂದು ಗ್ರ್ಯಾಂಡ್ ಮುಫ್ತಿ ಅಭಿಪ್ರಾಯಪಟ್ಟರು.
ಮನೆ, ಉಳಿತಾಯ ಹಾಗೂ ಅಗತ್ಯ ದಾಖಲೆಗಳನ್ನು ಕಳೆದುಕೊಂಡಿರುವ ಬಡ ಕುಟುಂಬಗಳಿಗೆ ಸರಕಾರ ತಕ್ಷಣ ಪುನರ್ವಸತಿ ಕಲ್ಪಿಸಬೇಕು. ಶಾಶ್ವತ ಪರಿಹಾರ ದೊರೆಯುವವರೆಗೆ ತಾತ್ಕಾಲಿಕ ಆಶ್ರಯ, ಆಹಾರ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಸರಕಾರ ವಹಿಸಬೇಕು ಎಂದು ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ ಗ್ರ್ಯಾಂಡ್ ಮುಫ್ತಿ, ಸ್ಥಳಾಂತರಗೊಂಡ ಕುಟುಂಬಗಳಿಗೆ ತಕ್ಷಣ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವಂತೆ ಎ.ಪಿ. ಉಸ್ತಾದ್ ಮನವಿ ಮಾಡಿದ್ದಾರೆ.
ಇದೇ ವೇಳೆ, ಮೈ ಕೊರೆಯುವ ಚಳಿಯಲ್ಲಿ ಆಶ್ರಯವಿಲ್ಲದೆ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಉದ್ದೇಶದಿಂದ ಇಂಡಿಯನ್ ಗ್ರ್ಯಾಂಡ್ ಮುಫ್ತಿಯವರ ಸೂಚನೆಯಂತೆ ಬೆಂಗಳೂರಿನ 'ಎಸ್‌ವೈಎಸ್ ಸಂತ್ವಾನ' ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







