ಅರಾವಳಿ ಪರ್ವತ ಶ್ರೇಣಿ ಕುರಿತ ಆದೇಶಕ್ಕೆ 'ಸುಪ್ರೀಂ' ತಡೆ

Photo credit: PTI
ಹೊಸದಿಲ್ಲಿ : ಅರಾವಳಿ ಪರ್ವತ ಶ್ರೇಣಿಗೆ ಇತ್ತೀಚೆಗೆ ನೀಡಲಾಗಿದ್ದ ವ್ಯಾಖ್ಯಾನಗಳ ಕುರಿತು ಇನ್ನಷ್ಟು ಸ್ಪಷ್ಟತೆ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದ್ದು, ಈ ಸಂಬಂಧ ಕಳೆದ ತಿಂಗಳು ನೀಡಿದ್ದ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.
ಅರಾವಳಿ ಪರ್ವತ ಶ್ರೇಣಿಗೆ ಸಂಬಂಧಿಸಿದಂತೆ ಹಿಂದಿನ ಸಮಿತಿಯು ನೀಡಿದ್ದ ಶಿಫಾರಸುಗಳ ಪರಿಸರ ಪರಿಣಾಮಗಳನ್ನು ತಜ್ಞರ ಸಮಿತಿ ಪರಿಶೀಲಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. ಹಿಂದಿನ ಸಮಿತಿಯಲ್ಲಿ ಹೆಚ್ಚಾಗಿ ಆಡಳಿತಾತ್ಮಕ ಅಧಿಕಾರಿಗಳೇ ಇದ್ದರು ಎಂಬುದನ್ನೂ ನ್ಯಾಯಪೀಠವು ಉಲ್ಲೇಖಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು, ಗಣಿಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅರಾವಳಿ ಪರ್ವತ ಶ್ರೇಣಿಗೆ ವ್ಯಾಖ್ಯಾನ ನೀಡಲು ರಚಿಸಲಾದ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ನೀಡಲಾಗಿದ್ದ ತೀರ್ಪನ್ನು ಸ್ಥಗಿತಗೊಳಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹಾಗೂ ಅರಾವಳಿ ವ್ಯಾಪ್ತಿಯ ನಾಲ್ಕು ರಾಜ್ಯಗಳಾದ ರಾಜಸ್ಥಾನ, ಗುಜರಾತ್, ದಿಲ್ಲಿ ಮತ್ತು ಹರಿಯಾಣಕ್ಕೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಅರಾವಳಿ ಬೆಟ್ಟಗಳಿಗೆ ಏಕರೂಪ ಹಾಗೂ ವೈಜ್ಞಾನಿಕ ವ್ಯಾಖ್ಯಾನ ನೀಡುವ ವಿಚಾರವು ವ್ಯಾಪಕ ವಿವಾದ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ನ್ಯಾಯಾಲಯದ ಮುಂದೆ ಬಂದಿದೆ. ನ. 20ರಂದು ನ್ಯಾಯಾಲಯವು ಅರಾವಳಿ ಬೆಟ್ಟಗಳು ಮತ್ತು ಪರ್ವತ ಶ್ರೇಣಿಗೆ ಸಮಾನ ವ್ಯಾಖ್ಯಾನವನ್ನು ಅಂಗೀಕರಿಸಿ, ತಜ್ಞರ ವರದಿಗಳು ಅಂತಿಮಗೊಳ್ಳುವವರೆಗೆ ದಿಲ್ಲಿ, ಹರ್ಯಾಣ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ ಗಣಿಗಾರಿಕೆಗೆ ಹೊಸ ಗುತ್ತಿಗೆಗಳನ್ನು ನೀಡದಂತೆ ಆದೇಶಿಸಿತ್ತು.
ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 21, 2026ರಂದು ನಡೆಯಲಿದೆ.







