ಆರಿಫ್ ಮುಹಮ್ಮದ್ ಖಾನ್ ರಾಜ್ಯಪಾಲ ಹುದ್ದೆಗೆ ಅನರ್ಹ ; ಸಿಪಿಎಂ ಪಾಲಿಟ್ ಬ್ಯೂರೋ ಆರೋಪ
ಆರಿಫ್ ಮುಹಮ್ಮದ್ ಖಾನ್ | Photo: PTI
ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರಾಜ್ಯಪಾಲ ಹುದ್ದೆಗೆ ಅನರ್ಹರು ಎಂದು ಸಿಪಿಎಂ ಪಕ್ಷದ ಪಾಲಿಟ್ ಬ್ಯೂರೋ ಹೇಳಿದೆ.
ರಾಜ್ಯದ ಚುನಾಯಿತ ಸರಕಾರದ ಮೇಲೆ ನಿರಂತರವಾಗಿ ರಾಜಕೀಯ ದಾಳಿಗಳನ್ನು ನಡೆಸುವ ಮೂಲಕ ಮತ್ತು ತನ್ನ ಎಲ್ಲೆ ಮೀರಿದ ವರ್ತನೆಯ ಮೂಲಕ ರಾಜ್ಯಪಾಲರು ತನ್ನ ಎಲ್ಲಾ ಮಿತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅದು ಆರೋಪಿಸಿದೆ. ಹುದ್ದೆಯಲ್ಲಿ ಮುಂದುವರಿಯಲು ತಾನು ಸಮರ್ಥನಲ್ಲ ಎನ್ನುವುದನ್ನು ಆರಿಫ್ ಮುಹಮ್ಮದ್ ಖಾನ್ ಸಾಬೀತುಪಡಿಸಿದ್ದಾರೆ ಎಂದು ಸಿಪಿಎಂ ನಾಯಕತ್ವ ಹೇಳಿದೆ.
‘‘ರಾಜ್ಯಪಾಲರ ಸಾಂವಿಧಾನಿಕ ಹುದ್ದೆಯನ್ನು ವಹಿಸಿರುವ ವ್ಯಕ್ತಿಯೊಬ್ಬ ಈ ರೀತಿಯಾಗಿ ವರ್ತಿಸಲು ಸಾಧ್ಯವಿಲ್ಲ. ತನ್ನ ವರ್ತನೆಯ ಮೂಲಕ, ಈ ಹುದ್ದೆಯಲ್ಲಿ ಮುಂದುವರಿಯಲು ತಾನು ಯೋಗ್ಯನಲ್ಲ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿಯಲು ಆರಂಭಿಸಿದೆ ಎಂಬುದಾಗಿ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ. ರಾಜ್ಯ ಸರಕಾರದ ವಿರುದ್ಧದ ಇಂಥ ಬೆದರಿಕೆಗಳನ್ನು ರಾಜ್ಯದ ಜನರು ಸಾರಾಸಗಟಾಗಿ ತಿರಸ್ಕರಿಸಲಿದ್ದಾರೆ’’ ಎಂದು ಸಿಪಿಎಂ ಪಾಲಿಟ್ಬ್ಯೂರೋ ಹೇಳಿದೆ.
‘‘ಅವರು ಇತ್ತೀಚೆಗೆ ಕೇರಳ ಮತ್ತು ಕಲ್ಲಿಕೋಟೆ ವಿಶ್ವವಿದ್ಯಾನಿಲಯಗಳ ನಾಮನಿರ್ದೇಶನ ಸ್ಥಾನಗಳಿಗೆ ಆರ್ಎಸ್ಎಸ್ ವ್ಯಕ್ತಿಗಳನ್ನು ನೇಮಿಸಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ಮಾಡಿದ್ದಾರೆ’’ ಎಂದು ಸಿಪಿಎಂ ಹೇಳಿದೆ.
‘‘ಈ ವಿಶ್ವವಿದ್ಯಾನಿಲಯಗಳ ಕುಲಪತಿ ಸ್ಥಾನವನ್ನು ರಾಜ್ಯಪಾಲರು ದುರುಪಯೋಗಪಡಿಸಿಕೊಂಡಿದ್ದಾರೆ’’ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಆರೋಪಿಸಿದೆ.