ನೆರೆಪೀಡಿತ ಉತ್ತರ ಸಿಕ್ಕಿಂನಲ್ಲಿ 48 ಗಂಟೆಗಳ ಅವಧಿಯಲ್ಲಿ ತೂಗು ಸೇತುವೆ ನಿರ್ಮಿಸಿದ ಭಾರತೀಯ ಸೇನಾಪಡೆ

PC : PTI
ಮಂಗನ್ (ಸಿಕ್ಕಿಂ): ನೆರೆಪೀಡಿತ ಉತ್ತರ ಸಿಕ್ಕಿಂನ ಗಡಿ ಗ್ರಾಮಗಳಿಗೆ ಮರು ಸಂಪರ್ಕ ಕಲ್ಪಿಸುವ ಒಂದು ಅಡಿ ಎತ್ತರದ ತೂಗು ಸೇತುವೆಯನ್ನು ಕೇವಲ 48 ಗಂಟೆಗಳಲ್ಲಿ ನಿರ್ಮಿಸುವ ಮೂಲಕ ಭಾರತೀಯ ಸೇನಾಪಡೆಯು ದಾಖಲೆ ನಿರ್ಮಿಸಿದೆ. ಈ ತಿಂಗಳ ಆರಂಭದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿ, ಒಟ್ಟು ಆರು ಮಂದಿ ಮೃತಪಟ್ಟಿದ್ದರು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸೇನೆಯು, "ಭಾರತೀಯ ಸೇನಾಪಡೆಯ ತ್ರಿಶಕ್ತಿ ಕಾರ್ಪ್ಸ್ ಎಂಜಿನಿಯರ್ಗಳು ನಿರಂತರವಾಗಿ ಮಳೆ ಸುರಿದು ಸಂಪರ್ಕ ಕಡಿದು ಹೋಗಿರುವ ಉತ್ತರ ಸಿಕ್ಕಿಂನ ಗಡಿ ಗ್ರಾಮಗಳ ನಡುವೆ ಮರು ಸಂಪರ್ಕ ಕಲ್ಪಿಸುವ ಮೂಲಕ ಜನರಿಗೆ ಅನುಕೂಲ ಮಾಡಲು ಕೇವಲ 48 ಗಂಟೆಗಳ ಅವಧಿಯಲ್ಲಿ 150 ಅಡಿ ಉದ್ದದ ತೂಗು ಸೇತುವೆಯನ್ನು ನಿರ್ಮಿಸಿದ್ದಾರೆ" ಎಂದು ಹೇಳಿದೆ.
ತೊರೆಯ ಮೇಲೆ 48 ಗಂಟೆಗಳ ಅವಧಿಯೊಳಗೆ ನಿರ್ಮಿಸಲಾಗಿರುವ ತೂಗು ಸೇತುವೆಯ ಮೂಲಕ ಗಡಿ ಗ್ರಾಮಗಳ ನಡುವೆ ಮರು ಸಂಪರ್ಕವನ್ನು ಕಲ್ಪಿಸಲಾಗಿದೆ. ಇದರಿಂದ ಜನ ಹಾಗೂ ಪರಿಹಾರ ಸಾಮಗ್ರಿಗಳ ಸಾಗಣೆಗೆ ಅನುಕೂಲವಾಗಿದೆ" ಎಂದೂ ಹೇಳಿದೆ.
ಜೂನ್ 13ರಂದು ಸುರಿದ ಭಾರಿ ಮಳೆಯಿಂದಾಗಿ ಉತ್ತರ ಸಿಕ್ಕಿಂನ ಮಂಗನ್ ಜಿಲ್ಲೆಯ ರಸ್ತೆ ಸಂಪರ್ಕಗಳು ಹಾಗೂ ಮೂಲಸೌಕರ್ಯಗಳು ಕೊಚ್ಚಿ ಹೋಗಿದ್ದವು. ಇದರ ಪರಿಣಾಮವಾಗಿ 1,000ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ನೆರೆಯ ನಡುವೆ ಸುಮಾರು ಒಂದು ವಾರದಿಂದ ಸಿಲುಕಿಕೊಂಡಿದ್ದಾರೆ.







