ಮೇಘ ಸ್ಫೋಟದಿಂದ ಕಥುವಾ ಸಂಪರ್ಕ ಕಡಿತ: ಗಾಯಾಳುಗಳ ಏರ್ ಲಿಫ್ಟ್ ಗೆ ಸೇನಾ ಹೆಲಿಕಾಪ್ಟರ್ ಗಳ ನಿಯೋಜನೆ

PC : PTI
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮೇಘ ಸ್ಫೋಟ ಪೀಡಿತ ಜೋಧ್ ಘಾಟಿ ಗ್ರಾಮದಲ್ಲಿ ರವಿವಾರ ಸೇನೆಯು ಹೆಲಿಕಾಪ್ಟರ್ ಗಳು ಹಾಗೂ ಹಲವು ಸೇನಾ ತುಕಡಿಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಜೋಧ್ ಘಾಟಿ ಗ್ರಾಮ ಹಾಗೂ ಜಂಗ್ಲೋಟೆ ಈ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದ್ದು, ಈ ದುರಂತದಲ್ಲಿ ಇದುವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ.
ಪ್ರವಾಹ ಪೀಡಿತ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಹಲವು ಸೇನಾ ತುಕಡಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘತ್ರಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ಹೆಲಿಕಾಪ್ಟರ್ ನಲ್ಲಿ 15 ಮಂದಿಯನ್ನು ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಧ್ರುವ್ ಹೆಲಿಕಾಪ್ಟರ್ ಗಳು ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ಆಸ್ಪತ್ರೆಯೊಂದಕ್ಕೆ ಗಾಯಾಳುಗಳನ್ನು ಏರ್ ಲಿಫ್ಟ್ ಮಾಡಿವೆ.
ರೈಸಿಂಗ್ ಸ್ಟಾರ್ ಕಾರ್ಪ್ಸ್ ನ ಸೇನಾ ತುಕಡಿಗಳು ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯರೊಂದಿಗೆ ಸಂತ್ರಸ್ತ ಕುಟುಂಬಗಳನ್ನು ರಕ್ಷಿಸಲು ಹಾಗೂ ಅವುಗಳಿಗೆ ಆಹಾರ ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸಲು ಕೆಲಸ ಮಾಡುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.







